ಶಿವಮೊಗ್ಗ: ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಕುರಿತು ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ಸ್ಪೀಕರ್ ಯು ಟಿ ಖಾದರ್ ತಿಳಿಸಿದ್ದಾರೆ.
ಶಿವಮೊಗ್ಗ ಪ್ರವಾಸದಲ್ಲಿರುವ ಅವರು ಜಿಲ್ಲೆಯ ಮಹಾನಗರ ಪಾಲಿಕೆಯ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ನಡೆದ ಯೋಗ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಖಾದರ್, "ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮಾಡಬಾರದೆಂಬ ತೀರ್ಮಾನ ಇನ್ನೂ ಮಾಡಿಲ್ಲ. ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದರು.
"ಬೆಳಗಾವಿಯಲ್ಲಿ ಎಷ್ಟು ದಿನ ಅಧಿವೇಶನ ನಡೆಯಲಿದೆ ಎಂಬುದನ್ನು ಸರ್ಕಾರ ತೀರ್ಮಾನಿಸಲಿದೆ. ನಾನು ಹಾಗೂ ಪರಿಷತ್ ಸಭಾಪತಿಗಳು ತೆರಳಿ ಅಧಿವೇಶನದ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಬಳಿ ಮಾತನಾಡಿದ್ದೇನೆ" ಎಂದು ತಿಳಿಸಿದರು.
ಶಿವಮೊಗ್ಗದ ಯೋಗ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಪೀಕರ್, ಕೇವಲ ಪ್ರೇಕ್ಷಕರಾಗಿರದೇ ತಾವು ಕೂಡ ಯೋಗಾಭ್ಯಾಸ ನಡೆಸಿ ವಿವಿಧ ಯೋಗಾಸನವನ್ನು ಮಾಡಿದರು. ಬಳಿಕ, "ನಾನು 6ನೇ ತರಗತಿಯಿಂದ ಯೋಗಾಸನ ಮಾಡಿಕೊಂಡು ಬಂದಿದ್ದೇನೆ. ಆಗಿನಿಂದಲೂ ನನಗೆ ಯೋಗದ ಪರಿಚಯವಿದೆ. ನನ್ನ ತಾಯಿಯವರ ತಂದೆ, ನನ್ನ ಅಜ್ಜ ಯೋಗ ಗುರುವಿನಲ್ಲಿಗೆ ಕರೆ ತರುತ್ತಿದ್ದರು. ಎಲ್ಲರೂ ಯೋಗಾಸನ ಮಾಡಬೇಕು. ಇದು ಆರೋಗ್ಯಕ್ಕೆ ಒಳ್ಳೆಯದು. ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ" ಎಂದು ಯೋಗಾಭ್ಯಾಸದ ಕುರಿತು ಮಾತನಾಡಿದರು.
ಇದನ್ನೂ ಓದಿ: ರಾಜ್ಯ ವಿಧಾನಸಭಾ ಕಲಾಪ ಡಿಜಿಟಲೀಕರಣಕ್ಕೆ ಚಿಂತನೆ: ಸ್ಪೀಕರ್ ಯು ಟಿ ಖಾದರ್
ಇತ್ತೀಚೆಗೆ ವಿಮಾನಯಾನದ ಅನುಭವವನ್ನು ಕಂಡಿರದ ಕೇರಳ ರಾಜ್ಯದ ಕುನ್ನಮಂಗಲಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಮಕ್ಕಳು ಹಾಗೂ ಸ್ಥಳೀಯರಿಗೆ ವಿಧಾನಸೌಧ ವೀಕ್ಷಣೆಗೆ ಸ್ಪೀಕರ್ ಯು.ಟಿ.ಖಾದರ್ ಅನುವು ಮಾಡಿಕೊಟ್ಟಿದ್ದರು.
ಈ ವೇಳೆ ಮಾತನಾಡಿದ್ದ ಅವರು, "ಕೇರಳ ರಾಜ್ಯದ ಕುನ್ನಮಂಗಲಂ ಗ್ರಾಮ ಪಂಚಾಯಿತಿಯ ಸದಸ್ಯರು, ಬಡ ಮಕ್ಕಳು ಹಾಗೂ ಸ್ಥಳೀಯರಿಗೆ ವಿಧಾನಸೌಧದ ವೀಕ್ಷಣೆಗಾಗಿ ಅನುಮತಿ ಕೋರಿ ಪತ್ರ ಬರೆದಿದ್ದರು. ಕರ್ನಾಟಕ ರಾಜ್ಯದ ಪ್ರಮುಖ ಪ್ರವಾಸ ತಾಣವಾದ ವಿಧಾನಸೌಧದ ವೀಕ್ಷಣೆಯನ್ನು ಪ್ರತಿಯೊಬ್ಬರೂ ಮಾಡಲಿ ಎಂದು ಮುಕ್ತವಾಗಿ ಒಪ್ಪಿ, ಅನುಮತಿ ನೀಡಲಾಯಿತು" ಎಂದು ತಿಳಿಸಿದ್ದರು.
"ವಿಧಾನಸೌಧದ ಇತಿಹಾಸವನ್ನು ಎಲ್ಲರೂ ಅರಿಯಬೇಕು. ಇತರೆ ರಾಜ್ಯಗಳು ಸೇರಿದಂತೆ ವಿದೇಶದಲ್ಲೂ ಈ ಭವ್ಯ ಸೌಧದ ಕುರಿತು ಮಾಹಿತಿ ಪಸರಿಸಬೇಕು. ವಿಧಾನಸೌಧದ ವೀಕ್ಷಣೆಗಾಗಿ ಆಗಮಿಸಿದ ಕೇರಳ ರಾಜ್ಯದ ಈ ಬಡಮಕ್ಕಳು ಹಾಗೂ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲು ಗೈಡ್ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು" ಎಂದು ಹೇಳಿದ್ದರು. ಸ್ಪೀಕರ್ ಅವರ ಈ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದನ್ನೂ ಓದಿ: ಭಾರತ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಭಾರತ ಅನ್ನೋದು ಸಣ್ಣ ಮಗುವಿಗೂ ಗೊತ್ತಿದೆ: ಯು.ಟಿ.ಖಾದರ್