ಶಿವಮೊಗ್ಗ: ತಾವೇ ಸಂವಿಧಾನ ತಜ್ಞರು ಅಂತಾ ಭಾವಿಸಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಂವಿಧಾನಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕ ಕೆ.ಎಸ್.ಈಶ್ವರಪ್ಪ ರಮೇಶ್ ಕುಮಾರ್ ವಿರುದ್ಧ ಶಿವಮೊಗ್ಗದಲ್ಲಿ ಕಿಡಿಕಾರಿದ್ದಾರೆ.
ಸುಪ್ರೀಂಕೋರ್ಟ್, ರಮೇಶ್ ಕುಮಾರ್ಅವರಿಗೆ ರಾಜೀನಾಮೆ ಅಂಗೀಕಾರ ಮಾಡಿ, ಇಲ್ಲ ರಾಜೀನಾಮೆ ತಿರಸ್ಕಾರ ಮಾಡುವ ತೀರ್ಮಾನ ತೆಗೆದುಕೊಳ್ಳಬೇಕು ಅಂತಾ ಹೇಳಿತ್ತು. ಆದ್ರೆ ಇವರಿಗೆ ಕೋರ್ಟ್ ಶಾಸಕರನ್ನು ಅನರ್ಹ ಮಾಡಲು ಹೇಳಿತ್ತೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಪರ ಇರುವವರು ರಮೇಶ್ ಕುಮಾರ್ ಅವರ ತೀರ್ಪನ್ನು ವೈಭವೀಕರಿಸುತ್ತಿದ್ದಾರೆ. ವಿಧಾನಸಭೆಯನ್ನು ಕುಮಾರಸ್ವಾಮಿ ದುರುಪಯೋಗ ಮಾಡಿಕೊಂಡರು. ನನ್ನ ರಾಜಕೀಯದ 30 ವರ್ಷದಲ್ಲಿ ವಿಧಾನಸಭೆಯಲ್ಲಿ ಸುಮ್ಮನೆ ಕುಳಿತುಕೊಂಡಿಲ್ಲ. ಇದೇ ಮೊದಲು ನಾವು ವಿಶ್ವಾಸ ಗೆಲ್ಲುವವರೆಗೂ ಮಾತನಾಡಬಾರದು ಅಂತಾ ಸುಮ್ಮನೆ ಕುಳಿತುಕೊಂಡಿದ್ವಿ ಅಷ್ಟೆ. ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ. ರಮೇಶ್ ಕುಮಾರ್ ಅವರು ಹರಿಶ್ಚಂದ್ರರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಟಿಪ್ಪು ಜಯಂತಿಯನ್ನು ರಾಜಕೀಯ ದ್ವೇಷದಿಂದ ರದ್ದು ಮಾಡಿಲ್ಲ. ಬದಲಾಗಿ ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡಲು ರದ್ದು ಮಾಡಲಾಗಿದೆ ಎಂದು ಸಿಎಂ ಟಿಪ್ಪು ಜಯಂತಿ ರದ್ದು ಮಾಡಿದ್ದನ್ನು ಸರ್ಮಥಿಸಿಕೊಂಡರು.