ಶಿವಮೊಗ್ಗ: ನಿನ್ನೆ ರಾತ್ರಿ ಶಿವಮೊಗ್ಗದ ಭರ್ಮಪ್ಪ ನಗರ ಹಾಗೂ ಸೀಗೆಹಟ್ಟಿಯಲ್ಲಿ ಎರಡು ಪ್ರಕರಣಗಳು ನಡೆದಿವೆ. ಎರಡು ಪ್ರತ್ಯೇಕ ಪ್ರಕರಣದ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಶೋಧಕ್ಕೆ ತಂಡ ರಚನೆ ಮಾಡಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಭರ್ಮಪ್ಪ ನಗರದಲ್ಲಿ ಪ್ರಕಾಶ್ ಎಂಬುವವರ ಮೇಲೆ ಬೈಕ್ನಲ್ಲಿ ಬಂದ ಮೂವರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರಿಗೆ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕಾಶ್ ತನ್ನ ಸ್ನೇಹಿತರ ಜೊತೆಯಿಂದ ಮನೆಗೆ ವಾಪಸ್ ಆಗುವಾಗ ಮೂವರು ಬೈಕ್ ನಲ್ಲಿ ಮುಸುಕುಧಾರಿಗಳಾಗಿ ಬಂದು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಅದೇ ರೀತಿ ನಿನ್ನೆ ರಾತ್ರಿ ಸೀಗೆಹಟ್ಟಿಯ ಅಂತರಘಟ್ಟಮ್ಮ ವೃತ್ತದ ಬಳಿ ಮೂರು ಬೈಕ್ನಲ್ಲಿ ಒಂಬತ್ತು ಜನ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೋಗಿದ್ದಾರೆ. ಇಲ್ಲಿ ಯಾರಿಗೂ ಯಾರ ಮೇಲೂ ಹಲ್ಲೆ ನಡೆಸಿಲ್ಲ. ಸಿಗೇಹಟ್ಟಿಯ ಅಂತರಘಟ್ಟಮ್ಮ ವೃತ್ತದಲ್ಲಿ ಸಿ.ಸಿ ಕ್ಯಾಮರಾವಿದ್ದು ಅಲ್ಲಿನ ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೆವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ: ಮುಸುಕು ಧರಿಸಿ ಬಂದು ಯುವಕನ ಮೇಲೆ ದಾಳಿ
ಸಿಗೇಹಟ್ಟಿಯಲ್ಲಿ ಎರಡು ಕೆಎಸ್ಆರ್ಪಿ ತುಕಡಿ ಹಾಗೂ ದೊಡ್ಡಪೇಟೆ ಪೊಲೀಸರ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇನ್ನು, ನಗರದಲ್ಲಿ ಹಲವು ಕಡೆ ಚೆಕ್ ಪೋಸ್ಟ್ ತೆರೆಯಲಾಗಿದೆ. ತ್ರಿಬಲ್ ರೈಡಿಂಗ್ ಮಾಡುವವರ ಮೇಲೆ ಗಮನ ಇಡಲಾಗಿದೆ. ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ವೆಂಕಟೇಶ ನಗರದಲ್ಲಿ ನಡೆದ ವಿಜಯ್ ಕೊಲೆಗೂ ಸಿಗೇಹಟ್ಟಿಯ ಘಟನೆಗೂ ಸಂಬಂಧವಿಲ್ಲ: ಸಿಗೇಹಟ್ಟಿಯಲ್ಲಿ ನಿನ್ನೆ ರಾತ್ರಿ ನಡೆದ ಘಟನೆಗೂ ವೆಂಕಟೇಶ ನಗರದ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ. ವಿಜಯ್ ಅವರ ಕೊಲೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೊಲೆಯಾದ ವಿಜಯ್ ತಂದೆ ಹೇಳುವ ಪ್ರಕಾರ, ನಿನ್ನೆ ಅವರ ಕುಟುಂಬದವರು ಫಿಲ್ಮ್ ನೋಡಿಕೊಂಡು ಮನೆಗೆ ಬಂದಿದ್ದಾರೆ.
ಮನೆಗೆ ಬಂದ ವಿಜಯ್ಗೆ ಫೋನ್ ಕರೆ ಬಂದಿದೆ. ಫೋನ್ ಬಂದ ತಕ್ಷಣ ಮನೆಯಿಂದ ಹೊರಗೆ ಬಂದ ವಿಜಯ್ ಕೊಲೆಯಾಗಿದ್ದಾರೆ. ಯಾಕೆ ಕೊಲೆ ನಡೆದಿದೆ ಎಂಬುದಕ್ಕೆ ನಮ್ಮ ಜಯನಗರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ವಿಜಯ್ ತಮ್ಮ ಹೆಂಡತಿಯಿಂದ ದೂರವಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕೊಲೆಗಾರರನ್ನು ಅದಷ್ಟು ಬೇಗ ಬಂಧಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ: ದುಷ್ಕರ್ಮಿಗಳಿಂದ ವ್ಯಕ್ತಿಯೊಬ್ಬನ ಕೊಲೆ