ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಾರಂಭವಾಗುವ ಸ್ಮಾರ್ಟ್ ಸಿಟಿ ಹಾಗೂ ಅಮೃತ್ ಯೋಜನೆ ಪ್ರಗತಿಯಲ್ಲಿದೆ. ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣ ಮಾಡುವತ್ತ ಗಮನ ಹರಿಸಲಾಗುವುದು ಎಂದು ನಗರಾಭಿವೃದ್ದಿ ಖಾತೆ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಎರಡು ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು, ಅಧಿಕಾರಿಗಳ ಸಭೆ ನಡೆಸಿ ನಗರದಲ್ಲಿ ಪ್ರಗತಿಯಲ್ಲಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಸ್ಥಳ ವೀಕ್ಷಣೆ ಮಾಡಿದರು.
ಇದು ಸಿಎಂ ಯಡಿಯೂರಪ್ಪ ತವರು ಜಿಲ್ಲೆಯಾಗಿರುವುದರಿಂದ ಇಲ್ಲಿನ ಕೆಲಸದ ಪ್ರಗತಿಯ ಬಗ್ಗೆ ನನಗೆ ಹೆಚ್ಚಿನ ಕಾಳಜಿ ಇದೆ. ಇದಕ್ಕಾಗಿ ಇಂದು ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ನಾನೇ ವೀಕ್ಷಣೆ ಮಾಡಿದ್ದೇನೆ. ಕಾಮಗಾರಿಗಳು ಪ್ರಗತಿಯಲ್ಲಿವೆ. ನಾನು ಪ್ರತಿ ತಿಂಗಳು ಇಲ್ಲಿಗೆ ಬಂದು ಕಾಮಗಾರಿ ಪರಿಶೀಲಿಸುತ್ತೇನೆ ಎಂದ ಅವರು, ಸಿಎಂ ಸಹ ತಮ್ಮ ಕ್ಷೇತ್ರದ ಬಗ್ಗೆ ಕೇಳುತ್ತಿರುತ್ತಾರೆ. ಇದರಿಂದಾಗಿ ನಾನು ಕಾಮಗಾರಿಗಳ ಮೇಲೆ ನಿಗಾ ವಹಿಸಿದ್ದೇನೆ ಎಂದು ತಿಳಿಸಿದರು.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಕ್ರಮ ಸಕ್ರಮದ ಬಗ್ಗೆ ತೀರ್ಮಾನ ಮಾಡಲಾಗಿದೆ. ಈ ಕುರಿತು ಸರ್ವೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಜಿಲ್ಲೆಯ ವಾಜಪೇಯಿ ಲೇ ಔಟ್ ಹಗರಣ ನನ್ನ ಗಮನಕ್ಕೆ ಬಂದಿದೆ. ಯಾರೋ ಒಬ್ಬರು ಹಾಕಿದ ಪ್ರಕರಣದಿಂದ ಸಾಕಷ್ಟು ಜನಕ್ಕೆ ಅನಾನುಕೂಲವಾಗುತ್ತಿದೆ. ಹೀಗಾಗಿ ಪ್ರಕರಣದ ಕುರಿತು ಲೋಕಾಯುಕ್ತರಲ್ಲಿ ಮನವಿ ಮಾಡಿದ್ದೇನೆ. ಅದೇ ರೀತಿ ರಾಜ್ಯದ ಅಡ್ವೋಕೇಟ್ ಜನರಲ್ ಜೊತೆ ಸಹ ಮಾತನಾಡಿದ್ದೇನೆ ಎಂದರು.
ಇದೇ ವೇಳೆ, ಮಾತನಾಡಿದ ಸಚಿವ ಈಶ್ವರಪ್ಪ, ಬಸವರಾಜ್ ಜಿಲ್ಲೆಯಲ್ಲಿನ ಪ್ರಗತಿ ಪರಿಶೀಲಿಸಿ ಸಭೆ ನಡೆಸಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದಾರೆ. ಇಂತಹ ಸಚಿವರು ಸಿಕ್ಕಿದ್ದು ನಮ್ಮ ಪುಣ್ಯ. ಇವರು ಆಗಾಗ ಬಂದು ಜಿಲ್ಲೆಯ ಕಾಮಗಾರಿಗಳ ಪರಿಶೀಲನೆ ನಡೆಸುವಂತಾಗಲಿ ಎಂದರು. ಈ ವೇಳೆ, ಸಂಸದ ರಾಘವೇಂದ್ರ, ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್ ಹಾಜರಿದ್ದರು.