ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಧ್ವಜಾರೋಹಣ ನೆರವೇರಿಸಿದರು.
ನಂತರ ತೆರೆದ ವಾಹನದಲ್ಲಿ ತೆರಳಿ ವಂದನೆ ಸ್ವೀಕರಿಸಿದರು. ಪೊಲೀಸ್, ಕೆ.ಎಸ್.ಆರ್.ಪಿ ಹಾಗೂ ಡಿ.ಎ.ಅರ್ ಗೃಹ ರಕ್ಷಕ ದಳದವರು ಆಕರ್ಷಕ ಪರೇಡ್ ನಡೆಸಿದರು.ಈ ಸಂದರ್ಭ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಕೊರೊನಾ ವಾರಿಯರ್ಸ್, ಕೊರೊನಾ ಗೆದ್ದು ಬಂದವರು ಸೇರಿದಂತೆ ಸಮಾಜದ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ಈಶ್ವರಪ್ಪ, ಕೊರೊನಾ ನಡುವೆ ಸ್ವಾತಂತ್ರ್ಯ ದಿನಾಚರಣೆ ವಿಭಿನ್ನವಾಗಿದೆ. ಅನೇಕರ ಪ್ರಾಣ ತ್ಯಾಗದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಜಿಲ್ಲೆಯ ಈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಹೋರಾಟವನ್ನು ನೆನಪು ಮಾಡಿಕೊಂಡರು. ಇನ್ನು ರಾಜ್ಯದಲ್ಲಿ ಕೊರೊನಾ ಹತೋಟಿಗೆ ತರಲು ಸರ್ಕಾರ ಸಂಪೂರ್ಣವಾಗಿ ಪ್ರಯತ್ನ ಮಾಡುತ್ತಿದೆ. ರಾಜ್ಯದ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ದವಾಗಿದ್ದು, ನೀರಾವರಿ ಸೇರಿದಂತೆ ಎಲ್ಲಾ ಇಲಾಖೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು.
ಈ ವೇಳೆ ಎಂಎಲ್ಸಿ ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಸುವರ್ಣ ಶಂಕರ್ ಸೇರಿದಂತೆ ಇತರರು ಹಾಜರಿದ್ದರು.