ಶಿವಮೊಗ್ಗ: ಕೊರೊನಾ ಕಾರಣದಿಂದ ಮನೆ, ದೇವಾಲಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈ ಬಾರಿ ಸರಳವಾಗಿ ಗಣೇಶೋತ್ಸವ ಆಚರಿಸಲಾಗಿದೆ. ಆದರೆ, ಇಲ್ಲೊಂದು ಯುವಕರ ತಂಡ ವಿಶೇಷವಾಗಿ ಪ್ರತಿಷ್ಠಾಪಿಸಿ ಗಮನ ಸೆಳೆದಿದೆ.
ಜಿಲ್ಲೆಯ ಸೊರಬ ಪಟ್ಟಣದ ಶ್ರೀ ಭೂತೇಶ್ವರ ವಾಹನ ಮಾಲೀಕರ ಮತ್ತು ಚಾಲಕರ ಸಂಘದಿಂದ ಪಿಕಪ್ ವಾಹನದಲ್ಲಿ ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತಿದೆ.
ಪ್ರತಿವರ್ಷ ಗಣೇಶೋತ್ಸವದಂದು ಜಿಲ್ಲೆಯಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಅದ್ಧೂರಿಯಾಗಿ ಸಾಂಸ್ಕೃತಿಕ ಚಟುವಟಿಕೆಗಳು, ಮೆರವಣಿಗೆ ಮುಂತಾದವುಗಳ ಮೂಲಕ ಆಚರಿಸಲಾಗುತ್ತಿತ್ತು. ಆದರೆ, ಜಿಲ್ಲಾಡಳಿತ ಒಂದು ದಿನದ ಅವಧಿಗೆ ಮಾತ್ರ ಪ್ರತಿಷ್ಠಾಪಿಸುವಂತೆ ಸೂಚಿಸಿದೆ.
ಯುವಕರ ತಂಡ ವಾಹನದಲ್ಲೇ ವಿಭಿನ್ನವಾಗಿ ಗಣೇಶನ ಪ್ರತಿಷ್ಠಾಪಿಸಿ ವಿಸರ್ಜಿಸಿದೆ. ನಗರದಲ್ಲೂ ಕೂಡ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗಳನ್ನು ಪಾಲಿಕೆ ವಾಹನ ಹಾಗೂ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಜನರು, ಒಂದೇ ದಿನಕ್ಕೆ ಗಣೇಶನನ್ನು ನಗರದ ಕೋರ್ಪಲಯ್ಯನ ಛತ್ರದ ಬಳಿ ತುಂಗಾ ನದಿಗೆ ವಿಸರ್ಜಿಸಲಾಗುತ್ತಿದೆ.