ಶಿವಮೊಗ್ಗ: ಕೊರೊನಾ ನಿಯಂತ್ರಿಸುವ ಸಲುವಾಗಿ ಮುಂದಿನ 15 ದಿನಗಳ ಕಾಲ ಜಿಲ್ಲಾದ್ಯಂತ ವ್ಯಾಪಕವಾಗಿ ಕೊರೊನಾ ಪರೀಕ್ಷೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸವೇಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ 15 ದಿನಗಳ ಕಾಲ ನಿತ್ಯ ಕನಿಷ್ಠ 3 ಸಾವಿರ ವ್ಯಕ್ತಿಗಳಿಗೆ ಕೊರೊನಾ ಪರೀಕ್ಷೆ ನಡೆಸಬೇಕು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳಲ್ಲಿ ಸಹ ಕೊರೊನಾ ತಪಾಸಣೆ ನಡೆಸಬೇಕು. ಇದಕ್ಕೆ ಅಗತ್ಯವಾದ ತಪಾಸಣಾ ಕಿಟ್‍ಗಳನ್ನು ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ಹೊರಗುತ್ತಿಗೆ ಸಿಬ್ಬಂದಿ ಪ್ರತಿಭಟನೆ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆ ಹೊರಭಾಗದಲ್ಲಿ ಸೇವಾ ಭದ್ರತೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೊರ ಗುತ್ತಿಗೆ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ದುರದೃಷ್ಟಕರ. ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಯಲ್ಲಿ 350 ಮಂದಿ ಕೊರೊನಾ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಸೇವೆ ಸಲ್ಲಿಸಬೇಕಾದವರು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
ಕ್ರಿಮಿನಲ್ ಮೊಕದ್ದಮೆ:
ಕೊರೊನಾ ಪೀಡಿತರ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅನುಮೋದನೆಗೊಂಡಿರುವ ಹುದ್ದೆಗಳಿಗೆ ಎರಡು ದಿನಗಳ ಒಳಗಾಗಿ ಪರ್ಯಾಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಜೊತೆಗೆ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಅವರು ಶಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಸರ್ಜನ್ ಡಾ.ರಘುನಂದನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.