ಶಿವಮೊಗ್ಗ : ಇತ್ತೀಚೆಗೆ ಯುಪಿಎಸ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯ ನಿವಾಸಿ ಚಂದನ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 777ನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
![Shivanogga boy who was ranked 777th in UPSC exam](https://etvbharatimages.akamaized.net/etvbharat/prod-images/kn-smg-03-ias-ka10011_07082020192723_0708f_02846_4.jpg)
ಇನ್ನು ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಚಂದನ್, ತಮ್ಮ ಓದು ಹಾಗೂ ಮುಂದಿನ ಗುರಿ ಏನು ಅನ್ನೋದನ್ನು ಹಂಚಿಕೊಂಡಿದ್ದಾರೆ. ಐಪಿಎಸ್ ಆಗಬೇಕೆನ್ನುವುದು ನನ್ನ ಆಸೆ. ಆದರೆ, ನನ್ನ ರ್ಯಾಂಕಿಂಗ್ಗೆ ಇದು ಸಿಗುವುದಿಲ್ಲ. ಹಾಗಂತಾ, ಈ ಪ್ರಯತ್ನ ಬಿಡುವುದಿಲ್ಲ. ಪ್ರಯತ್ನ ಎನ್ನುವುದಿದ್ರೆ ಇದು ಖಂಡಿತ ಸಾಧ್ಯ. ಈ ಪ್ರಯತ್ನಕ್ಕೆ ತಂದೆ-ತಾಯಿ ಸೇರಿ ಎಲ್ಲರ ಪ್ರೋತ್ಸಾಹ ಅಗತ್ಯ. ನನಗೆ ಅದು ಸಿಕ್ಕಿತು.
![Shivanogga boy who was ranked 777th in UPSC exam](https://etvbharatimages.akamaized.net/etvbharat/prod-images/kn-smg-03-ias-ka10011_07082020192729_0708f_02846_825.jpg)
ಹಾಗಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು. ಎಂಜಿನಿಯರ್ ಪದವೀಧರನಾದ ನನಗೆ ಅಪ್ಪ ಹಣಕಾಸಿನ ಸಪೋರ್ಟ್ ಮಾಡಿದ್ರೆ, ಅಮ್ಮ ಎಮೋಷನಲ್ ಸಪೋರ್ಟ್ ಕೊಟ್ರು. ಇದರ ಫಲವೇ ಈ ಸಾಧನೆ. ಯಾರೂ ಸಹ ಆಗಲ್ಲ ಎಂದು ಹಿಂದೆ ಸರಿಯಬೇಡಿ. ಒಂದಲ್ಲ ಒಂದು ದಿನ ನಿಮ್ಮ ಕನಸು ನನಸಾಗುತ್ತೆ ಎನ್ನುತ್ತಾರೆ ಯುಪಿಎಸ್ಸಿ ರ‍್ಯಾಂಕ್ ಪಡೆದ ಚಂದನ್.
![Shivanogga boy who was ranked 777th in UPSC exam](https://etvbharatimages.akamaized.net/etvbharat/prod-images/kn-smg-03-ias-ka10011_07082020192729_0708f_02846_861.jpg)
ಮಗನ ಸಾಧನೆ ಕುರಿತು ಹೆಮ್ಮೆ ವ್ಯಕ್ತಪಡಿಸಿದ ತಂದೆ ಶ್ರೀನಿವಾಸ್, ನನ್ನ ಮಗ ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದ. ನಾನೂ ಸಹ ಪದವಿ ಮುಗಿದ ಮೇಲೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದೆ. ಆದರೆ, ನನಗದು ಸಾಧ್ಯವಾಗಿರಲಿಲ್ಲ. ನನ್ನ ಕನಸನ್ನ ನನ್ನ ಮಗ ನನಸು ಮಾಡಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.