ಶಿವಮೊಗ್ಗ: ಯುಎಪಿಎ ಕಾಯ್ದೆಯಡಿ ಬಂಧಿತರಾದ ಶಂಕಿತ ಉಗ್ರರು ರಾಷ್ಟ್ರಧ್ವಜವನ್ನು ಸುಟ್ಟು, ಬಾಂಬ್ ಬ್ಲಾಸ್ಟ್ ಟ್ರಯಲ್ ನಡೆಸಿ ಖುಷಿ ಪಟ್ಟಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.
ಡಿಎಆರ್ ಸಂಭಾಗಣದಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಡಿಯಲ್ಲಿ ಮಾಹಿತಿ ನೀಡಿದ ಅವರು, ಆಗಸ್ಟ್ 15 ರಲ್ಲಿ ಪ್ರೇಮ್ ಸಿಂಗ್ ಮೇಲೆ ಚಾಕು ಇರಿತವಾದ ಮೇಲೆ ನಡೆದ ತನಿಖೆಯಿಂದ ಶಂಕಿತ ಉಗ್ರರ ಮಾಹಿತಿ ಲಭ್ಯವಾಯಿತು. ಚಾಕು ಇರಿತ ಪ್ರಕರಣದ ನಾಲ್ಕು ಜನ ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಜಬೀವುಲ್ಲಾಗೆ ತೀರ್ಥಹಳ್ಳಿಯ ಶಾರೀಕ್ ಪ್ರಚೋದನೆ ನೀಡಿದ್ದ ಅಂಶ ಹೊರಗೆ ಬರುತ್ತದೆ.
ನಂತರ ತನಿಖೆ ಮುಂದುವರೆಸಿದಾಗ ಸಿದ್ದೇಶ್ವರ ನಗರದ ಸೈಯ್ಯದ್ ಯಾಸೀನ್, ಮಂಗಳೂರಿನ ನಿವಾಸಿ ಮಾಝ್ ಹಾಗೂ ತೀರ್ಥಹಳ್ಳಿಯ ಶಾರೀಕ್ ಸೇರಿಕೊಂಡು ಬಾಂಬ್ ತಯಾರು ಮಾಡಿ ಅದನ್ನು ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಸಿಕ್ಕಿತು. ಈ ಮಾಹಿತಿಯನ್ನು ಬೆನ್ನತ್ತಿದ ಪೊಲೀಸರು, ಕಳೆದ ಒಂದು ತಿಂಗಳಿನಿಂದ ಆರೋಪಿಗಳ ಹುಡುಕಾಟ ಆರಂಭಿಸಿ ಬಳಿಕ ಒಬ್ಬೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು.
ಆಗ ಯಾಸೀನ್ ಹಾಗೂ ಮಾಝ್ ಶಿವಮೊಗ್ಗದ ಹಳೆ ಗುರುಪುರದ ತುಂಗಾ ನದಿ ದಂಡೆ ಕೆಮ್ಮನಗುಂಡಿ ಎಂಬ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಬಾಂಬ್ ಬ್ಲಾಸ್ಟ್ ಟ್ರಯಲ್ ನಡೆಸಿರುವುದು ಮತ್ತು ಅದೇ ಜಾಗದಲ್ಲಿ ನಮ್ಮ ರಾಷ್ಟಧ್ವಜ ಸುಟ್ಟು ಹಾಕಿದ್ದರು ಎಂಬ ಮಾಹಿತಿ ತನಿಖೆ ಗೊತ್ತಾಗಿದೆ. ಸ್ಥಳ ಮಹಜರು ನಡೆಸಿದ ಮೇಲೆ ಎಲ್ಲಾ ಅಂಶಗಳು ದೃಢಪಟ್ಟಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಕ್ಲಾಸ್ಮೇಟ್ಸ್ಗಳಾಗಿದ್ದ ಬಂಧಿತರು: ಆರೋಪಿಗಳಾದ ಸೈಯದ್ ಯಾಸೀನ್, ಶಾರೀಕ್ ಹಾಗೂ ಮಾಝ್ ಮೂವರು ಪಿಯುಸಿ ಕ್ಲಾಸ್ಮೇಟ್ ಗಳಾಗಿದ್ದವರು. ಯಾಸೀನ್ ಶಿವಮೊಗ್ಗದಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರ್ ಓದುತ್ತಿದ್ದು, ಅಂತಿಮ ವರ್ಷದಲ್ಲಿ ಎರಡು ವಿಷಯದಲ್ಲಿ ಫೇಲ್ ಆಗಿದ್ದರು. ಇನ್ನೂ ಮಾಝ್ ಮಂಗಳೂರಿನಲ್ಲಿ ಮೆಕಾನಿಕಲ್ ಇಂಜಿನಿಯರ್ ಓದುತ್ತಿದ್ದಾನೆ.
ಇನ್ನು ಶಾರೀಕ್ ಬಿಕಾಂ ಅರ್ಧಕ್ಕೆ ಬಿಟ್ಟಿದ್ದ, ಯಾಸೀನ್ ಹಾಗೂ ಮಾಝ್ಗೆ ಶಾರೀಕ್ ಪ್ರಚೋದನೆ ನೀಡುತ್ತಿದ್ದನು. ಭಾರತಕ್ಕೆ ಬ್ರಿಟಿಷರದಿಂದ ಸ್ವಾತಂತ್ರ ಸಿಕ್ಕಿರಬಹುದು, ಆದರೆ ನಮಗೆ ನಿಜವಾದ ಸ್ವಾತಂತ್ರ ಸಿಗುವುದು ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಿದಾಗ ಎಂದು ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗಲು ಪ್ರೇಚೋದನೆ ನೀಡಿದ್ದು ತನಿಖೆಯಿಂದ ಹೊರಬಂದಿದೆ ಎಂದರು.
(ಓದಿ: ಶಿವಮೊಗ್ಗಕ್ಕೂ ಉಗ್ರರ ನಂಟು: ಶಂಕಿತ ಯುವಕರ ಬಂಧನ - ಎಸ್ಪಿ ಮಾಹಿತಿ)
ಶಾರೀಕ್ ಮುಸ್ಲಿಂ ಮೂಲಭೂತವಾದದ ಬಗ್ಗೆ ಮಾತನಾಡುತ್ತಿದ್ದನು. ಯಾಸೀನ್ ಮೊಬೈಲ್ಗೆ ಮುಸ್ಲಿಂ ಉಗ್ರವಾದಿಗಳಿಗೆ ಸಂಬಂಧಿಸಿದ ಮತ್ತು ಇಸ್ಲಾಂಗೆ ಸಂಬಂಧಿಸಿದ ಪಿಡಿಎಫ್ ಫೈಲ್, ವಿಡಿಯೋ ಹಾಗೂ ಆಡಿಯೋ ಮತ್ತು ಅವುಗಳ ಲಿಂಕ್ಗಳನ್ನು ಟೆಲಿಗ್ರಾಂ, ವೈರ್, ಎಲಿಮೆಂಟ್, ವಿಕ್ಕರ್ ಇತ್ಯಾದಿ ಮೆಸ್ಸೆಂಜರ್ ಆ್ಯಪ್ಗಳ ಮೂಲಕ ಕಳುಹಿಸುತ್ತಿದ್ದನು ಎಂದು ಎಸ್ಪಿ ತಿಳಿಸಿದರು.
ಸ್ವಾತಂತ್ರೋತ್ಸವ ನಡೆದು ಕೆಲ ದಿನಗಳಲ್ಲಿಯೇ ರಾಷ್ಟ್ರಧ್ವಜ ಸುಟ್ಟರು: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡಿ ದೇಶ ಸಂಭ್ರಮ ಪಟ್ಟ ಕೆಲ ದಿನಗಳಲ್ಲಿ ತುಂಗಾ ನದಿಯ ಕೆಮ್ಮನಗುಂಡಿ ಜಾಗದಲ್ಲಿ ರಾಷ್ಟ್ರಧ್ವಜ ಸುಟ್ಟು ಅದನ್ನು ಯಾಸೀನ್ ಹಾಗೂ ಮಾಝ್ ವಿಡಿಯೋ ಮಾಡಿದ್ದರು. ಅಲ್ಲದೆ ಶಿವಮೊಗ್ಗದ ವಿವಿಧ ಅಂಗಡಿಗಳಲ್ಲಿ ಸ್ಫೋಟಕಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದ್ದರು.
ಐಎಸ್ಐಎಸ್ ಅಧಿಕೃತ ಮಾಧ್ಯಮ ಅಲ್- ಹಯದ್ ಟೆಲಿಗ್ರಾಂ ಚಾನಲ್ ಸದಸ್ಯರಾಗಿದ್ದರು: ಬಂಧಿತರು ತಮ್ಮ ಮೊಬೈಲ್ನಲ್ಲಿ ಟೆಲಿಗ್ರಾಂ ಆ್ಯಪ್ ಹೊಂದಿದ್ದು, ಐಎಸ್ಐಎಸ್ ಅಧಿಕೃತ ಮಾಧ್ಯಮವಾದ ಅಲ್-ಹಯದ್ನ ಟೆಲಿಗ್ರಾಂ ಚಾನಲ್ನ ಸದಸ್ಯರಾಗಿದ್ದರು.
ವಿಡಿಯೋ, ಪಿಡಿಎಫ್ ನೋಡಿ ಬಾಂಬ್ ತಯಾರಿ: ಯಾಸಿನ್ ಹಾಗೂ ಮಾಝ್ಗೆ ಬಾಂಬ್ ತಯಾರಿಸುವ ಕುರಿತು ಶಾರೀಕ್ ವಿಡಿಯೋ ಕಳುಹಿಸಿತ್ತಿದ್ದನು. ಇದನ್ನು ನೋಡಿ ಬಾಂಬ್ ತಯಾರು ಮಾಡುವುದುವನ್ನು ಕಲಿತಿದ್ದರು. ಬಾಂಬ್ ತಯಾರಿಗೆ ಬೇಕಾದ ಟೈಮರ್, ರೀಲೆ ಸರ್ಕ್ಯೂಟ್ಗಳನ್ನು ಅಮೆಜಾನ್ನಿಂದ ಖರೀದಿಸಿದ್ದರು. ಶಿವಮೊಗ್ಗದಲ್ಲಿ 9 ವೋಲ್ಟ್ನ ಎರಡು ಬಲ್ಬ್, ಎರಡು ಬ್ಯಾಟರಿ, ಸ್ಚೀಚ್ ವೈಯರ್, ಮ್ಯಾಚ್ ಬಾಕ್ಸ್ಗಳು ಹಾಗೂ ಇತರ ಸ್ಫೋಟಕ ವಸ್ತುಗಳನ್ನು ಖರೀದಿಸಿ ಬಾಂಬ್ ತಯಾರಿಸಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.
ಬಾಂಬ್ ತಯಾರಿಸಲು ಬಂಧಿತರಿಗೆ ಕ್ರಿಪ್ಟೊ ಕರೆಸಿ ಮೂಲಕ ಹಣ ರವಾನೆ: ಬಾಂಬ್ ತಯಾರಿಗೆ ಬೇಕಾದ ಹಣವನ್ನು ಬಂಧಿತರಿಗೆ ಕ್ರಿಪ್ಟೊ ಕರೆಸ್ಸಿ ಮೂಲಕ ಶಾರೀಕ್ ರವಾನೆ ಮಾಡಿದ್ದ. ಈ ಹಣದಿಂದ ಅಮೆಜಾನ್ ಹಾಗೂ ಶಿವಮೊಗ್ಗದ ಡಬ್ಬಲ್ ರೋಡ್, ಗಾಂಧಿ ಬಜಾರ್ ಹಾಗೂ ಎಸ್ಎಲ್ಎನ್ ಶಾಪ್ಗಳಲ್ಲಿ ವಿವಿಧ ವಸ್ತುಗಳನ್ನು ಖರೀದಿ ಮಾಡಿದ್ದು ತಿಳಿದು ಬಂದಿದೆ.
ಪ್ರಕರಣ ಸಂಬಂಧ 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಹಲವಾರು ಸಾಕ್ಷ್ಯಗಳು ಲಭ್ಯವಾಗಿವೆ. ಬಂಧಿತರಿಂದ 14 ಮೊಬೈಲ್, 1 ಡಾಂಗಲ್, ಪೆನ್ ಡ್ರೈವ್, 2 ಲ್ಯಾಪ್ ಟಾಪ್ ಇತರೆ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಹಾಗೂ ಶಾರೀಕ್ ಬಳಸಿದ ಮಾರುತಿ ರಿಡ್ಜ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ವಿಚಾರಣೆ ಮುಂದುವರೆದಿದ್ದು, ಏಳು ದಿನ ಕಾಲ ಪೊಲೀಸ್ ಕಸ್ಟಡಿ ಮುಗಿದ ನಂತರ ಮತ್ತೆ ವಿಚಾರಣೆಗೆ ಕೋರ್ಟ್ ಮನವಿ ಮಾಡಲಾಗುವುದು ಎಂದು ಎಸ್ಪಿ ಬಿ.ಎಂ.ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.