ಶಿವಮೊಗ್ಗ: ಜಿಲ್ಲೆಯ ವಿದ್ಯಾರ್ಥಿನಿಯೋರ್ವಳು ತನ್ನ ಚಿತ್ರಕಲೆಯ ಮೂಲಕ ದೆಹಲಿಯಲ್ಲಿ ನಡೆಯುವ ಈ ಸಾರಿಯ ಗಣರಾಜೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸುವ ಅವಕಾಶ ಪಡೆದಿದ್ದಾಳೆ.
ಶಿವಮೊಗ್ಗದ ನಿವಾಸಿ ಅಮೃತ ಎಂಬುವರು ಈ ಅವಕಾಶ ಪಡೆದ ವಿದ್ಯಾರ್ಥಿನಿ. ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಅಮೃತಾರ ತಂದೆ ಮೆಕಾನಿಕ್ ಆಗಿದ್ದು, ತಾಯಿ ಮನೆಯಲ್ಲಿಯೇ ಇರುತ್ತಾರೆ. 1ನೇ ತರಗತಿಯಿಂದ ಶಿವಮೊಗ್ಗದ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಅಮೃತ ಚಿತ್ರಕಲೆ ಅಭ್ಯಾಸ ಮಾಡಿದ್ದಾರೆ.
ಓದಿ: ತುಮಕೂರಿನ ದೇವಸ್ಥಾನದಲ್ಲಿ ಬೆತ್ತಲಾಗಿ ಮಾನಸಿಕ ಅಸ್ವಸ್ಥನಿಂದ ದಾಂಧಲೆ..
ಕೇಂದ್ರ ಸರ್ಕಾರವು ಸೈನ್ಯದ ವತಿಯಿಂದ ಮಕ್ಕಳಲ್ಲಿ ದೇಶ ಭಕ್ತಿಯ ಅರಿವು, ದೇಶದ ಗೌರವ ಹೆಚ್ಚಿಸುವ ಹಾಗೂ ಸೈನ್ಯದ ಬಗ್ಗೆ ಅರಿವು ಮೂಡಿಸುವ 'ವೀರಗಾಥ' ಎಂಬ ವಿಷಯದ ಮೇಲೆ ಸ್ಪರ್ಧೆಯನ್ನು ದೇಶಾದ್ಯಂತ ಏರ್ಪಡಿಸಿತ್ತು.
ಇದು ಶಾಲಾ ಮಕ್ಕಳಿಗೆ ಮಾತ್ರ ನಡೆಸಿದ ಸ್ಪರ್ಧೆ ಆಗಿತ್ತು. ಈ ಸ್ಪರ್ಧೆಯಲ್ಲಿ ಮಕ್ಕಳಿಗೆ ಸೈನಿಕರ ಕುರಿತ ಸ್ಪರ್ಧಾ ವಿಷಯವನ್ನು ನೀಡಿ ಚಿತ್ರ ಬಿಡಿಸಲು ಅವಕಾಶ ಕಲ್ಪಿಸಲಾಗಿತ್ತು.
ಭಾರತದ ಮೂರು ಸೈನ್ಯದ ವಿಭಾಗಗಳನ್ನು ಒಳಗೊಂಡಂತೆ ನೀಡುವ ಪ್ರಶಸ್ತಿಯಾದ ವೀರಗಾಥದ ಕುರಿತಾದ ವಿಷಯದಲ್ಲಿ ಅಮೃತ, ಸೈನಿಕರ ಹೋರಾಟ, ವೀರ ಮರಣ ಹಾಗೂ ಅವರಿಗೆ ಲಭ್ಯವಾಗುವ ಪ್ರಶಸ್ತಿ ಕುರಿತು ಚಿತ್ರ ಬರೆದಿದ್ದಳು. ಜೊತೆಗೆ ವೀರಗಾಥ ಪ್ರಶಸ್ತಿ ಪಡೆದ ಮೈಥಲಿ ಮಧುಮಿತ ಹಾಗೂ ಸೋಮನಾಥ ಶರ್ಮಾ ಅವರ ಸ್ಫೂರ್ತಿಯನ್ನಿಟ್ಟುಕೊಂಡು ಚಿತ್ರವನ್ನು ರಚಿಸಿದ್ದಳು.
ಓದಿ: 'ರಾಷ್ಟ್ರಧ್ವಜ ಘನತೆಗೆ ಅನುಗುಣವಾಗಿ ವಿಲೇವಾರಿ ಮಾಡಬೇಕು.. ಎಲ್ಲೆಂದರಲ್ಲಿ ಎಸೆಯುವಂತಿಲ್ಲ: ಕೇಂದ್ರದ ಸೂಚನೆ
ಈ ಚಿತ್ರದಲ್ಲಿ ಮೈಥಿಲಿ ಮಧುಮಿತ, ಸೋಮನಾಥ್ ಶರ್ಮಾ ಸೇರಿದಂತೆ ಯುದ್ದದಲ್ಲಿ ಹೋರಾಟ ನಡೆಸುವ ಸೈನಿಕರ ಚಿತ್ರವನ್ನು ರಚಿಸಿದ್ದಳು. ಭೂ ಸೇನೆಯ ಜಲ ಮಾರ್ಗದ ಹೋರಾಟದಲ್ಲಿ ವಿರೋಚಿತವಾಗಿ ಹೋರಾಟ ನಡೆಸಿದ ಯೋಧರು ಹಾಗೂ ಪ್ರಶಸ್ತಿ ಪಡೆಯುತ್ತಿರುವ ಚಿತ್ರವನ್ನು ಬಿಡಿಸಿದ್ದಳು.
ಸ್ಪರ್ಧೆಯನ್ನು ಆನ್ಲೈನ್ ಮೂಲಕ ನಡೆಸಲಾಗಿತ್ತು. ಅಮೃತ ಚಿತ್ರ ಬಿಡಿಸಿ ಕಳುಹಿಸಿದ ನಂತರ ಆಯೋಜಕರು ಫೋನ್ ಮಾಡಿ ವಿದ್ಯಾರ್ಥಿ ಕುರಿತು ಮಾಹಿತಿ ಪಡೆದು ಪ್ರಶಸ್ತಿ ಘೋಷಿಸಿದ್ದಾರೆ. ಈ ಸ್ಪರ್ಧೆಯಲ್ಲಿ ದೇಶದ 4,700 ಸಾವಿರ ಶಾಲೆಯ 8 ಲಕ್ಷಕ್ಕೂ ಅಧಿಕ ಮಕ್ಕಳು ಭಾಗಿಯಾಗಿದ್ದರು. ಇದರಲ್ಲಿ ಅತ್ಯುತ್ತಮ 25 ಚಿತ್ರಗಳನ್ನ ಆಯ್ಕೆ ಮಾಡಿದ್ದಾರೆ.
ಕರ್ನಾಟಕದ ಮೂರು ಮಕ್ಕಳಲ್ಲಿ ಅಮೃತ ಕೂಡ ಒಬ್ಬಳು ಎಂಬುದು ಹೆಮ್ಮೆಯ ವಿಷಯ. ಈ ಬಾಲಕಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿ ಪ್ರಶಸ್ತಿಯನ್ನು ಪಡೆಯಲಿದ್ದಾಳೆ. ಅಮೃತ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ಶ್ರೀಕಾಂತ್ ಹೆಗಡೆ ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿದ್ದಾರೆ.
ಓದಿ: ಭಾರತ-ಚೀನಾ ನಡುವೆ 14ನೇ ಸುತ್ತಿನ ಮಿಲಿಟರಿ ಮಾತುಕತೆ : ಲಡಾಖ್ ಬಿಕ್ಕಟ್ಟು ಸುಧಾರಿಸಿದೆ ಎಂದ ಸೇನಾ ಮುಖ್ಯಸ್ಥ