ಶಿವಮೊಗ್ಗ: ಅರಣ್ಯ ಇಲಾಖೆಯು ಉರಳುಗಲ್ಲು ಗ್ರಾಮಸ್ಥರ ಮೇಲೆ ದೌರ್ಜನ್ಯವೆಸಗಿದೆ ಎಂದು ಆರೋಪಿಸಿ ಶರಾವತಿ ಹಿನ್ನೀರಿನ ಪ್ರದೇಶದ ಜನತೆ ನಾಳೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಬಿಳಿಗಾರು ಗ್ರಾಮದಿಂದ ಕಾರ್ಗಲ್ ಪಟ್ಟಣದವರೆಗೆ ಸುಮಾರು 22 ಕಿ.ಮೀ ದೂರದವರೆಗೆ ಪಾದಯಾತ್ರೆ ನಡೆಸಲಾಗುತ್ತದೆ. ಶರಾವತಿ ಹಿನ್ನೀರಿನ ಪ್ರದೇಶವಾದ ಉರುಳುಗಲ್ಲು ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದ್ದಕ್ಕೆ ಸುಳ್ಳು ಮೊಕದ್ದಮ್ಮೆ ದಾಖಲಿಸಿ ಉರುಳುಗಲ್ಲು ಗ್ರಾಮದ ಸುಮಾರು ಐದು ಜನ ಯುವಕರನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಕುರಿತು ಮಾತನಾಡಿದ ಗ್ರಾಮಸ್ಥರೊಬ್ಬರು, ಮರ ತೆರವುಗೊಳಿಸಿದ್ದ ಯುವಕರನ್ನು ಅರಣ್ಯಾಧಿಕಾರಿಗಳು ದೊಡ್ಡ ಮರಗಳ್ಳರ ರೀತಿ ಸ್ಲೇಟ್ ನೀಡಿ ಫೋಟೊ ತೆಗೆಸಿದ್ದಾರೆ. ಸುಳ್ಳು ಪ್ರಕರಣವನ್ನು ತಮ್ಮ ದೊಡ್ಡ ಸಾಧನೆಯನ್ನಾಗಿ ಮಾಡಿಕೊಂಡಿದ್ದಾರೆ.
ತಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮರ ತೆರವು ಮಾಡಿದವರನ್ನು ಸಹ ಜೈಲಿಗೆ ಕಳುಹಿಸಲಾಗಿದೆ. ಸುಳ್ಳು ಮೊಕದ್ದಮೆ ದಾಖಲಿಸಿ ಗ್ರಾಮಸ್ಥರಿಗೆ ಕಿರುಕುಳ ನೀಡುವ ಅಧಿಕಾರಿಗಳನ್ನು ತಕ್ಷಣ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಕಾಗೋಡು ಜನಪರ ಹೋರಾಟ ವೇದಿಕೆಯ ಸಹಯೋಗದಲ್ಲಿ ಶರಾವತಿ ಹಿನ್ನೀರಿನ ಪ್ರದೇಶದವರು ಹಾಗೂ ಸಾಗರ ತಾಲೂಕು ರೈತ ಸಂಘದವರು ಪಾದಯಾತ್ರೆ ನಡೆಸಲಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಮಳೆ ಅರ್ಭಟಕ್ಕೆ ಕೊಚ್ಚಿಹೋದ ಹಾವನೂರ ಸೇತುವೆ: ವಿದ್ಯಾರ್ಥಿಗಳಿಗೆ ಸಂಕಷ್ಟ