ಶಿವಮೊಗ್ಗ: ಈ ಬಾರಿಯ ನಾಡಹಬ್ಬ ದಸಾರಾವನ್ನು ಮೈಸೂರು ಮಾದರಿಯಲ್ಲಿ 9 ದಿನಗಳವರೆಗೆ ಆಚರಣೆ ಮಾಡಲಾಗುತ್ತಿದ್ದು, ಅದಕ್ಕೆ ಬೇಕಾದ ಸಿದ್ದತೆಗಳನ್ನು ನಡೆಸಲಾಗುತ್ತಿದೆ. ಇನ್ನು ಕುರಿತು ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿದ್ದೇವೆ ಎಂದು ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಹೇಳಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ದಸರಾ ಪೂರ್ವಭಾವಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ನಾಡಹಬ್ಬ ದಸರಾವನ್ನು ವೈಭವದಿಂದ ಆಚರಿಸಲು ಮಹಾನಗರ ಪಾಲಿಕೆ ಸದಸ್ಯರು ಸರ್ವಾನುಮತದಿಂದ ಬೆಂಬಲ ನೀಡಿದ್ದು, ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿದ್ದೇವೆ ಎಂದರು.
ಈಗಾಗಲೇ ದಸರಾ ಆಚರಣೆಗೆ ಎರಡು ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರದ ಮಾರ್ಗಸೂಚಿ ಬಂದ ನಂತರ ಯಾವ ರೀತಿ ದಸರಾ ಆಚರಣೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ಮಾಡಿಕೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು.
9 ದಿನಗಳ ಕಾಲ ವೈಭವದ ದಸರಾ ಆಯೋಜನೆ ಮಾಡಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಮಹಾನಗರ ಪಾಲಿಕೆ ಸಿದ್ದವಾಗಿದೆ. ಆದರೆ, ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಇನ್ನೆರಡು ದಿನದಲ್ಲಿ ಬಿಡುಗಡೆ ಮಾಡಲಿದೆ. ನಂತರ ಸರಳ ದಸರಾ ಆಚರಣೆಯೋ, ವೈಭವದ ದಸರಾ ಆಚರಣೆ ಮಾಡುವುದೋ ಎಂಬುದರ ಕುರಿತು ಅಂತಿಮ ಮಾಡಲಾಗುವುದು ಎಂದರು.
ಇಂದು ಆಯೋಜಿಸಿದ್ದ ದಸರಾ ಪೂರ್ವಭಾವಿ ಸಭೆಯಲ್ಲಿ ವಿಪಕ್ಷದ ಸದಸ್ಯರು ಸಹ ಈ ಬಾರಿಯ ದಸರಾ ಹಬ್ಬವನ್ನು ವೈಭವದಿಂದ ಆಚರಣೆ ಮಾಡಲು ನಮ್ಮ ಬೆಂಬಲ ಇದೆ ಎಂದರು. ಒಂಬತ್ತು ದಿನಗಳ ಕಾಲ ಮೈಸೂರು ರೀತಿಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ವೈಭವದ ದಸರಾ ಆಚರಣೆ ಮಾಡೋಣ ಎಂದು ಮೇಯರ್ ಅವರಿಗೆ ಮನವಿ ಸಲ್ಲಿಸಿದರು.