ಶಿವಮೊಗ್ಗ : ಗಂಧಕ್ಕೆ ಎಲ್ಲ ಕಾಲದಲ್ಲೂ ಉತ್ತಮ ಬೇಡಿಕೆ ಇರುತ್ತದೆ. ಇದರಿಂದ ಮಲೆನಾಡಿನ ರೈತರು ಈಗ ಶ್ರೀಗಂಧ ಬೆಳೆಯತ್ತ ಒಲವು ತೋರಿದ್ದು, ತಮ್ಮ ಆದಾಯದ ಮೂಲ ಹುಡುಕಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ರೈತ ಕುಮಾರ್ ತನ್ನ ಐದು ಎಕರೆ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆಯುವ ಮೂಲಕ ಹೊಸ ಕೃಷಿ ಪದ್ಧತಿಗೆ ನಾಂದಿ ಹಾಡಿದ್ದಾರೆ.
ರೈತ ಕುಮಾರ್ ಈ ಹಿಂದೆ, ಅಡಿಕೆ, ಜೋಳ, ಭತ್ತ ಬೆಳೆದು ಕೈ ಸುಟ್ಟುಕೊಂಡಿದ್ದರು. ಈಗ ಶ್ರೀಗಂಧ ಬೆಳೆಯತ್ತ ಒಲವು ತೋರಿದ್ದಾರೆ. ಇದಕ್ಕಾಗಿ ತಮ್ಮ 5 ಎಕರೆ ಭೂಮಿಯಲ್ಲಿ ಶ್ರೀಗಂಧ ಕೃಷಿಯನ್ನು ಮಾಡಲು ಮುಂದಾಗಿದ್ದಾರೆ. ತಮ್ಮ ಐದು ಎಕರೆ ಭೂಮಿಯಲ್ಲಿ ಬೆಳೆಯಲೆಂದು 2,500 ಸಾವಿರ ಗಿಡಗಳನ್ನು ಅರಣ್ಯ ಇಲಾಖೆಯಿಂದ ಖರೀದಿಸಿದ್ದು, ಪ್ರತೀ ಗಿಡಕ್ಕೆ 5 ರೂಪಾಯಿಯಂತೆ ಖರೀದಿ ಮಾಡಿದ್ದಾರೆ. ತಮ್ಮ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆಯಲು ಪ್ರಾರಂಭಿಸಿ ಐದು ವರ್ಷಗಳಾಗಿವೆ. ಈಗಾಗಲೇ 5 ಅಡಿಗೂ ಎತ್ತರವಾಗಿ ಗಂಧದ ಗಿಡ ಬೆಳೆದಿದೆ.
ಅರಣ್ಯ ಇಲಾಖೆಯಿಂದ ಪ್ರೋತ್ಸಾಹ : ಯಾರೇ ಶ್ರೀಗಂಧ ಬೆಳೆಯಲು ಮುಂದಾದರೆ, ಅವರಿಗೆ ಅರಣ್ಯ ಇಲಾಖೆಯು ಸಹಾಯ ಮಾಡುತ್ತದೆ. ಗಂಧ ಬೆಳೆಯುವ ರೈತರ ಜಮೀನಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ನಂತರ ಇಲಾಖೆಯು ರೈತನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ತಾವು ಬೆಳೆದ ಗಂಧವನ್ನು ಅರಣ್ಯ ಇಲಾಖೆ ಮೂಲಕ ವಿಲೇವಾರಿಯ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ. ನಂತರ ಪ್ರತಿ ಒಂದು ಗಿಡಕ್ಕೆ 40 ರೂ. ನಂತೆ ಸತತ ಮೂರು ವರ್ಷ ಹಣ ನೀಡಲಾಗುತ್ತದೆ.
ಸಾಲ ಸೌಲಭ್ಯ : ಅರಣ್ಯ ಇಲಾಖೆಯವರು ಜಮೀನು ಹಾಗೂ ಬೆಳೆಯನ್ನು ಪರಿಶೀಲಿಸಿ, ಪ್ರತಿ ಗಿಡಕ್ಕೂ ಒಂದು ದರ ನಿಗದಿ ಮಾಡುತ್ತದೆ. ಐದು ಎಕರೆಗೆ ಕನಿಷ್ಠ 50 ಲಕ್ಷ ರೂ.ವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
ಅಡಿಕೆ ಬೆಳೆಕ್ಕಿಂತ ಉತ್ತಮ ಆದಾಯ : ಶ್ರೀಗಂಧವನ್ನು ಸತತ 15 ವರ್ಷಗಳ ಕಾಲ ಬೆಳೆಸಬೇಕು. ಇದು ದೀರ್ಘಕಾಲ ಅಂದುಕೊಂಡರೂ ಸಹ ಲಾಭದಾಯಕವಾಗಿದೆ. ಅಡಿಕೆ ಬೆಳೆಯು ಕನಿಷ್ಟ 6 ರಿಂದ 7 ವರ್ಷಗಳ ಕಾಲ ಬೆಳೆಸಿದ ನಂತರ ಅದು ಫಸಲಿಗೆ ಬರುತ್ತದೆ. ನಂತರ ಮತ್ತೆ ವರ್ಷಕ್ಕೊಮ್ಮೆಯಾದರೂ ಸಹ ಗೊಬ್ಬರ ಹಾಕಬೇಕು, ಔಷಧ ನೀಡಬೇಕು. ಆದರೆ, ಗಂಧದ ಬೆಳೆಗೆ ಯಾವುದೇ ಗೂಬ್ಬರ, ಔಷಧ ನೀಡದೆ ಬೆಳೆಯಬಹುದುದಾಗಿದೆ.
ಶ್ರೀಗಂಧದ ಜತೆ ಮಿಶ್ರ ಬೆಳೆ ಬೆಳೆಯಬಹುದು:
ಶ್ರೀಗಂಧ ಬೆಳೆಯನ್ನು ಬೆಳೆಯುವಾಗ ಅವುಗಳ ನಡುವೆ ಮಿಶ್ರ ಬೆಳೆಯಾಗಿ ಹತ್ತಿ, ತೊಗರಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಬಹುದಾಗಿದೆ. ಈ ಬೆಳೆಗಳಿಗೆ ಹಾಕಿದ ಗೊಬ್ಬರ ಗಂಧದ ಮರಗಳಿಗೆ ಅನುಕೂಲವಾಗುತ್ತದೆ. ಗಂಧಕ್ಕೆ ಕೇವಲ ನೀರನ್ನು ನೀಡಿದ್ರೆ ಸಾಕಂತೆ. ಕುಮಾರ್ ಅವರು ಹನಿ ನೀರಾವರಿಯ ಮೂಲಕ ಗಂಧವನ್ನು ಬೆಳೆಸುತ್ತಿದ್ದಾರೆ.
ಕರುನಾಡಲ್ಲಿ ಗಂಧದ ಕೊರತೆ? : ಇತ್ತಿಚೀನ ದಿನಗಳಲ್ಲಿ ಗಂಧವು ಮರಗಳ್ಳರ ಹಾವಳಿಯಿಂದ ಕಣ್ಮರೆಯಾಗುತ್ತಿದೆ. ಶ್ರಿಗಂಧದ ಕೊರತೆ ಈಗ ಎಲ್ಲ ಕಡೆ ಪ್ರಾರಂಭವಾಗಿದೆ. ಈ ಹಿನ್ನೆಲೆ ಸರ್ಕಾರಗಳು ಶ್ರೀಗಂಧ ಬೆಳೆಗೆ ಪ್ರೋತ್ಸಾಹ ನೀಡುತ್ತಿದೆ. ಶ್ರೀಗಂಧ ಸರ್ವಕಾಲದಲ್ಲೂ ತನ್ನ ಬೆಲೆ ಉಳಿಸಿಕೊಂಡಿದೆ. ಶ್ರೀಗಂಧ ಹಿಂದೆ ಕಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದವು. ಶ್ರೀಗಂಧ ಕಳ್ಳರ ಕೈಗೆ ಸಿಕ್ಕು ಈಗ ಅವಸಾನದ ಅಂಚಿಗೆ ತಲುಪಿದೆ. ಗಂಧದ ನಾಡು ಎಂದು ಕರೆಯುಲ್ಪಡುತ್ತಿದ್ದ ಕರುನಾಡಲ್ಲಿ ಗಂಧದ ಕೊರತೆ ಕಂಡು ಬರುತ್ತಿದೆ. ಇದರಿಂದ ರಾಜ್ಯದಲ್ಲಿ ಗಂಧದ ಉತ್ಪನ್ನವನ್ನು ಉತ್ಪಾದಿಸಲು ನೆರೆಯ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿನಿಂದ ಗಂಧವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಶ್ರೀಗಂಧ ಬೆಳೆಯು 15 ವರ್ಷದ ಸುದೀರ್ಘ ಬೆಳೆ ಎಂದರೂ ಸಹ ಇತರೆ ಬೆಳೆಗಳಿಗೆ ಹೋಲಿಕೆ ಮಾಡಿಕೊಂಡ್ರೆ, ಇದು ಹೆಚ್ಚಿನ ಪರಿಶ್ರಮವಿಲ್ಲದೇ ಲಾಭ ಪಡೆಯುವ ಬೆಳೆಯಾಗಿದೆ. ಇದರಿಂದ ಶ್ರೀಗಂಧವನ್ನು ಬೆಳೆಯುವ ರೈತ ಲಕ್ಷಾಧಿಪತಿ ಅಲ್ಲ ಕೋಟ್ಯಾಧಿಪತಿಯಾಗುತ್ತಾನೆ. ಸದ್ಯ ಕುಮಾರ್ ಅವರು ತಮ್ಮ ಸುತ್ತಮುತ್ತಲ ರೈತರನ್ನು ಒಗ್ಗೂಡಿಸಿಕೊಂಡು ಶ್ರೀಗಂಧ ಬೆಳೆಗಾರರ ಸಂಘ ರಚನೆ ಮಾಡಿ ಗಂಧ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದ ಶ್ರೀಗಂಧ ಬೆಳೆ ಲಾಭದಾಯಕವಾಗಿದೆ. ಇದನ್ನೇ ಇತರೆ ರೈತರು ಮಾಡಿದ್ರೆ ಲಾಭದಾಯಕವಾಗುತ್ತದೆ ಎಂಬ ಅಭಿಪ್ರಾಯವನ್ನು ಕುಮಾರ್ ವ್ಯಕ್ತಪಡಿಸುತ್ತಾರೆ. ಇನ್ನೂ ಪಕ್ಕದ ಗ್ರಾಮದ ರಂಗಪ್ಪ ಸಹ ಶ್ರೀಗಂಧ ಬೆಳೆಯನ್ನು ನೋಡಿ ತಾವು ಸಹ ಬೆಳೆಯಲು ಉತ್ಸುಕತೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ: ಈ ಗ್ರಾಮದಲ್ಲಿರೋದು ಒಬ್ಬನೇ ಒಬ್ಬ ವೃದ್ಧ...ಇದುವೇ ವಿನಾಶ ಕಂಡ ಹಳ್ಳಿಯ ನೈಜಕಥೆ
ಕುಮಾರ ಅವರ ಶ್ರೀಗಂಧ ಬೆಳೆಯನ್ನು ನೋಡಲು ಅನೇಕ ರೈತರು ಬೇರೆ ಬೇರೆ ಜಿಲ್ಲೆ, ತಾಲೂಕುಗಳಿಂದ ಆಗಮಿಸುತ್ತಿದ್ದಾರೆ. ತಾವು ಸಹ ಪ್ರೇರಣೆಗೊಂಡು ಶ್ರೀಗಂಧ ಬೆಳೆಯುವ ಸಂಕಲ್ಪವನ್ನು ಮಾಡಿದ್ದಾರೆ. ರೈತರು ಒಂದೇ ಬೆಳೆಯನ್ನು ಬೆಳೆಯದೇ ಎಲ್ಲ ರೀತಿಯ ಬೆಳೆಯನ್ನು ಬೆಳೆದ್ರೆ, ಒಂದರ ನಷ್ಟವನ್ನು ಇನ್ನೂಂದರಲ್ಲಿ ತುಂಬಬಹುದಾಗಿದೆ ಎನ್ನುತ್ತಾರೆ ರೈತ ರವಿ ಅವರು..