ಶಿವಮೊಗ್ಗ: ಕೊರೊನಾ ಸೋಂಕು ನಿಯಂತ್ರಣ ಔಷಧ ತಯಾರಿಕೆಯ ಸಂಶೋಧನೆಗಳು ವಿಶ್ವದೆಲ್ಲೆಡೆ ನಡೆಯುತ್ತಿದ್ದು, ನಿಯಮಾನುಸಾರ ಪ್ರಯೋಗಗಳು ನಡೆಯುತ್ತಿವೆ. ಲಸಿಕೆಯು ಶೀಘ್ರದಲ್ಲಿ ಜನಸೇವೆಗೆ ಲಭ್ಯವಾಗುವ ನಿರೀಕ್ಷೆ ಇದ್ದು, ಲಸಿಕೆಯನ್ನು ಮೊದಲ ಆದ್ಯತೆಯಾಗಿ ಸೋಂಕು ನಿಯಂತ್ರಣದಲ್ಲಿ ಕಾರ್ಯಪ್ರವೃತ್ತರಾಗಿರುವವರಿಗೆ ವಿತರಿಸಲು ಅರ್ಹರಿರುವವರ ವಿವರವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಕೊರೊನಾ ಸೋಂಕು ನಿಯಂತ್ರಣದ ಕುರಿತು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಈಗಾಗಲೇ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳ ವಿವರಗಳನ್ನು ಸಂಗ್ರಹಿಸಲಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯವರು ತಮ್ಮಲ್ಲಿರುವ ಎಲ್ಲಾ ವೈದ್ಯರು ಹಾಗೂ ಸಿಬ್ಬಂಧಿಗಳ ವಿವರಗಳನ್ನು ಕೂಡಲೇ ಆರೋಗ್ಯ ಇಲಾಖೆಗೆ ತಲುಪಿಸಬೇಕು. ಇವರೊಂದಿಗೆ ಆಯುಷ್, ಆಯುರ್ವೇದಿಕ್, ಡೆಂಟಲ್ ಸಂಸ್ಥೆಗಳವರೂ ಕೂಡ ಸಂಬಂಧಿತ ಆರೋಗ್ಯ ಇಲಾಖೆಯವರಿಗೆ ಮಾಹಿತಿ ತಲುಪಿಸುವಂತೆ ಸೂಚಿಸಿದ ಅವರು, ಸರ್ಕಾರವು ಜನರ ಆರೋಗ್ಯ, ಹಿತ ಮತ್ತು ಸುರಕ್ಷತೆಯ ದೃಷ್ಠಿಯಿಂದ ಉತ್ತಮವಾದ ಯೋಜನೆಯೊಂದನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದು, ಅರ್ಹರೆಲ್ಲರೂ ಮಾಹಿತಿ ನೀಡಿ ಸಹಕರಿಸುವಂತೆ ಸೂಚಿಸಿದರು.
ಇವರೊಂದಿಗೆ ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರೂ ಸಹ ಲಸಿಕೆ ಪಡೆಯಲು ಅರ್ಹರಿದ್ದು, ಅವರೂ ತಮ್ಮ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದ ಅವರು ಉಚಿತವಾಗಿ ದೊರೆಯಲಿರುವ ಈ ಸೌಲಭ್ಯವನ್ನು ಅರ್ಹರೆಲ್ಲರೂ ನಿರ್ಲಕ್ಷಿಸದೆ ಪಡೆಯಬೇಕೆಂದು ತಿಳಿಸಿದರು.
ಈ ಕಾರ್ಯಕ್ಕಾಗಿ ನಿಯೋಜಿತ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನಹರಿಸಿ, ಮಾಹಿತಿ ಪಡೆದುಕೊಳ್ಳಬೇಕು ಎಂದ ಅವರು, ಸೋಂಕು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ನಡೆಸುತ್ತಿರುವ ಪರೀಕ್ಷೆಗಳು ನಿರಂತರವಾಗಿ ನಡೆಯುವಂತೆ ಹಾಗೂ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚಿಸಿದರು.
ಈ ಸೋಂಕಿನ ನಿಯಂತ್ರಣ ಸಂಬಂಧ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಅನುದಾನ ಬಳಕೆಯ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆಯೂ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಧರ್, ಆರ್.ಸಿ.ಹೆಚ್.ಅಧಿಕಾರಿ ಡಾ,ನಾಗರಾಜನಾಯ್ಕ್, ಡಾ, ಶಂಕರಪ್ಪ, ಡಾ, ಗುಡದಪ್ಪ ಕುಸಬಿ, ಡಾ,ಮಂಜುನಾಥ ನಾಗಲೀಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.