ಶಿವಮೊಗ್ಗ: ಭಾರತೀಯ ಸಂಸ್ಕೃತಿ-ಪರಂಪರೆಯಲ್ಲಿ ಗೋವಿಗೆ ಮಹತ್ತರವಾದ ಸ್ಥಾನವಿದ್ದು, ಗೋವನ್ನು ಮಾತೆಯ ರೂಪದಲ್ಲಿ ಪೂಜಿಸಲಾಗುತ್ತೆ. ಅಂತಹ ಗೋವಿಗೆ ಮೇವಿನ ಜೊತೆಗೆ ಸೂಕ್ತ ರಕ್ಷಣೆ ನೀಡಲು ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಮುಂದಾಗಿದೆ. ಕಳೆದ ಹಲವು ದಶಕಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ಬ್ರಾಹ್ಮಣ ಮಹಾಸಭಾ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಗೋವುಗಳ ರಕ್ಷಣೆಗೆ ಹೊಸ ಯೋಜನೆಯೊಂದನ್ನು ರೂಪಿಸಿದೆ.
ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಶತಮಾನೋತ್ಸವ ಆಚರಿಸಿಕೊಂಡಿದ್ದ ಬ್ರಾಹ್ಮಣ ಮಹಾಸಭಾ, ಸಮಾಜಕ್ಕಾಗಿ ಮೂರು ಶಾಶ್ವತ ಕಾರ್ಯಕ್ರಮ ರೂಪಿಸುವ ನಿರ್ಣಯ ಕೈಗೊಂಡಿತ್ತು. ಪ್ರಮುಖವಾಗಿ ಹೆಣ್ಣು ಮಕ್ಕಳ ಹಾಸ್ಟೆಲ್, ವೃದ್ಧಾಶ್ರಮ ಹಾಗೂ ಗೋಶಾಲೆ ಆರಂಭಿಸುವ ನಿರ್ಣಯದಂತೆ ಇದೀಗ ಗೋ ಶಾಲೆಯನ್ನು ಆರಂಭಿಸಲಾಗಿದೆ.
ಆರಂಭದಲ್ಲಿ ಮತ್ತೂರಿನ ಗೋನ್ಯಾಸ ಸಂಸ್ಥೆಯ ಗೋಶಾಲೆ ವಹಿಸಿಕೊಂಡು ಮುನ್ನೆಡೆಸುತ್ತಿದ್ದ ಬ್ರಾಹ್ಮಣ ಮಹಾಸಭಾ, ಇದೀಗ ದೊಡ್ಡ ಪ್ರಮಾಣದಲ್ಲಿ ಸುರಭಿ ಗೋಶಾಲೆ ನಿರ್ಮಾಣ ಮಾಡಿದೆ. ಮಂಡೆನಕೊಪ್ಪ ಬಳಿ ಸುಮಾರು 9 ಎಕರೆ ಜಾಗವನ್ನು ಗುತ್ತಿಗೆ ಪಡೆದುಕೊಂಡು ಎಲ್ಲಾ ಮೂಲಭೂತ ಸೌಕರ್ಯ ಒಳಗೊಂಡಂತೆ ಸುಸಜ್ಜಿತ ಎರಡು ಕೊಟ್ಟಿಗೆಗಳನ್ನು ನಿರ್ಮಿಸಲಾಗಿದ್ದು, ಶುದ್ಧ ಗೋ ಮೂತ್ರ ಸಂಗ್ರಹ ಹಾಗೂ ಸಾವಯವ ಗೊಬ್ಬರ ಸಂಗ್ರಹಣೆಗೆ ವ್ಯವಸ್ಥೆ ಮಾಡಲಾಗಿದೆ.
ಮನೆಗಳಲ್ಲಿ ಗೋ ಪಾಲನೆ ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಜೊತೆಗೆ ಬಿಡಾಡಿ ಹಸುಗಳು, ಗಂಡು ಕರುಗಳು, ವಯಸ್ಸಾಗಿರುವ ಹಸುಗಳ ಸಂರಕ್ಷಣೆಗೆ ಆದ್ಯತೆ ನೀಡಿದೆ. ಪ್ರಸ್ತುತ ಸುರಭಿ ಗೋ ಶಾಲೆಯಲ್ಲಿ 70 ಹಸುಗಳಿದ್ದು, ಮುಂದಿನ ದಿನದಲ್ಲಿ 300 ಹಸುಗಳಿಗೆ ಆಶ್ರಯ ನೀಡಲು ಉದ್ಧೇಶಿಸಲಾಗಿದೆ.
ಒಟ್ಟಾರೆ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಗೋವುಗಳ ರಕ್ಷಣೆ ಬಗ್ಗೆ ಕೇವಲ ಮಾತನಾಡದೆ, ಅವುಗಳ ಉಳಿವಿಗಾಗಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಸುರಭಿ ಗೋಶಾಲೆ ಆರಂಭಿಸಿ ಗೋ ಸಂರಕ್ಷಣಾ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ.
ಇದನ್ನೂ ಓದಿ: ಜಿಲ್ಲಾಡಳಿತದ ಕಣ್ಣು ತೆರೆಸಿದ ಈಟಿವಿ ಭಾರತ .. 1 ಗಂಟೆಯೊಳಗೆ ಫಲಶ್ರುತಿ.. ಅವು ನರಕದಿಂದ ಪಾರಾಗಲಿ!