ಶಿವಮೊಗ್ಗ: ನಗರದ ಮಲ್ಲಿಗೇನಹಳ್ಳಿಯ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಅವ್ಯವಹಾರ ಪ್ರಕರಣವನ್ನು ಸರ್ಕಾರ ತಕ್ಷಣವೇ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಸೂಡಾ ವತಿಯಿಂದ 2011-12ರಲ್ಲಿ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ವಾಜಪೇಯಿ ಬಡಾವಣೆ ನಿರ್ಮಿಸಲಾಯಿತು. ಸುಮಾರು 1163 ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ, ಅಕ್ರಮ ನಡೆದಿದೆ ಎಂದು ನಿವೃತ್ತ ನ್ಯಾಯಮೂರ್ತಿ ರವೀಂದ್ರನಾಥ್ ವರದಿ ಆಧಾರದಿಂದ ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಸಂಪೂರ್ಣ ವಿಚಾರ ಹಾಗೂ ಕಡತಗಳು ಕರ್ನಾಟಕ ಲೋಕಾಯುಕ್ತ ಇಲಾಖೆಯ ಅಂಗಳದಲ್ಲಿ ನನೆಗುದ್ದಿಗೆ ಬಿದ್ದಿವೆ ಎಂದು ಪ್ರತಿಭಟನಾಕಾರು ಆರೋಪಿಸಿದರು.
ಈ ಪ್ರಕರಣದ ಬಗ್ಗೆ ತನಿಖೆ ವಿಳಂಬವಾಗುತ್ತಿದೆ. ಈ ಬಗ್ಗೆ ಜಿಲ್ಲಾಕಾರಿಗಳಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಪ್ರಾಧಿಕಾರದ ಸಚಿವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಕೂಡಲೇ ತ್ವರಿತಗತಿಯಲ್ಲಿ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥ ರ ವಿರುದ್ಧ ಕಾನೂನು ಕ್ರಮ ಕೈಗೋಳಬೇಕು ಹಾಗೂ ಈ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.