ಶಿವಮೊಗ್ಗ: ತನ್ನ ತಾಯಿಯ ಶವ ಸಂಸ್ಕಾರ ಮಾಡಲು ಜಮೀನಿನಲ್ಲಿ ಜಾಗ ನೀಡಬೇಕೆಂದು ಆಗ್ರಹಿಸಿ ಮಗ ತನ್ನ ತಂದೆ ಮನೆ ಮುಂದೆ ರಾತ್ರಿಯಿಡೀ ತಾಯಿಯ ಶವದೊಂದಿಗೆ ಪ್ರತಿಭಟನೆ ನಡೆಸಿರುವ ಘಟನೆ ಹೊಸನಗರ ತಾಲೂಕಿನ ಯಡಗುಡ್ಡೆ ಗ್ರಾಮದಲ್ಲಿ ನಡೆದಿದೆ.
ಯಡಗುಡ್ಡೆ ಗ್ರಾಮದ ನಾಗರಾಜ್ ಎಂಬುವರ ಮೊದಲ ಪತ್ನಿ ನಾಗರತ್ನ (50) ಕ್ಯಾನ್ಸರ್ನಿಂದ ಮೃತರಾಗಿದ್ದಾರೆ. ಇವರ ಶವ ಸಂಸ್ಕಾರಕ್ಕೆ ಪುತ್ರ ತಮ್ಮ ಜಮೀನಿನಲ್ಲೇ ಜಾಗ ನೀಡಿ ಎಂದಿದ್ದು, ತಂದೆ ನಾಗರಾಜ್ ಒಪ್ಪಲಿಲ್ಲ. ಹಾಗಾಗಿ ಮಗ ಗಣೇಶ್ ತಾಯಿಯ ಶವದೊಂದಿಗೆ ತಂದೆ ಮನೆ ಮುಂದೆ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ.
ನಾಗರತ್ನ 10 ವರ್ಷಗಳ ಹಿಂದೆ ಪತಿ ನಾಗರಾಜ್ ಹಾಗೂ ಮಗ ಗಣೇಶನನ್ನು ಬಿಟ್ಟು ಹೋಗಿದ್ದು, ನಾಗರಾಜ್ ಎರಡನೇ ಮದುವೆಯಾಗಿದ್ದರು. ನಾಗರತ್ನ ನಿನ್ನೆ ಕ್ಯಾನ್ಸರ್ನಿಂದ ಮೃತರಾಗಿದ್ದಾರೆ. ಇದರಿಂದ ಮಗ ಗಣೇಶ ತನ್ನ ತಾಯಿಯನ್ನು ತಮ್ಮದೇ ಜಮೀನಿನಲ್ಲಿ ಶವ ಸಂಸ್ಕಾರ ನಡೆಸಬೇಕೆಂದು ಕೇಳಿಕೊಂಡಾಗ ತಂದೆ ಒಪ್ಪಿಗೆ ನೀಡಿಲ್ಲ. ಪರಿಣಾಮ ತಾಯಿಯ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾನೆ. ನಂತರ ರಿಪ್ಪನಪೇಟೆ ಪೊಲೀಸರು ಮಧ್ಯ ಪ್ರವೇಶಿಸಿ, ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.