ಶಿವಮೊಗ್ಗ: ಹುಣಸೋಡಿನ ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಅಲ್ಲಿನ ಗ್ರಾಮಸ್ಥರು ಆಘಾತಕಾರಿ ವಿಚಾರಗಳನ್ನು 'ಈಟಿವಿ ಭಾರತ'ದ ಜೊತೆ ಹಂಚಿಕೊಂಡಿದ್ದಾರೆ.
ಈ ಕುರಿತು ಹುಣಸೋಡು ಗ್ರಾಮದ ಮಂಜುನಾಥ್ ಮಾತನಾಡಿ, ಊಟ ಮಾಡಿ ಮಲಗಲು ತಯಾರಾಗುತ್ತಿದ್ದ ನಮಗೆ ಜೋರಾಗಿ ಬಂದ ಶಬ್ದ ಗಾಬರಿಗೊಳಿಸಿತು. ಏನಾಯ್ತು ಅಂತ ನೋಡುವಷ್ಟರಲ್ಲಿ ಜನರೆಲ್ಲಾ ಮನೆಯಿಂದ ಹೊರಗೆ ಓಡಿ ಬರುತ್ತಿದ್ದರು. ನಮ್ಮೂರಿನ ಕಲ್ಲು ಕ್ವಾರಿಯ ಬಳಿ ಜೋರಾಗಿ ಬಂದ ಶಬ್ದ ಹಾಗೂ ಹೊಗೆ ನಮ್ಮನ್ನು ಇನ್ನಷ್ಟು ಗಾಬರಿಯಾಗಿಸಿತು ಎಂದು ಗಾಬರಿಯಾಗಿ ಮಾತನಾಡಿದರು.
ಮಂಜುನಾಥ್ ನಿನ್ನೆ ಸ್ಫೋಟವಾದ ಜಾಗಕ್ಕೆ ಮೊದಲು ಹೋದವರು. ಇವರು ಬ್ಲಾಸ್ಟ್ ಆದ ಜಾಗಕ್ಕೆ ಹೋಗುವಷ್ಟರಲ್ಲಿ ಅಲ್ಲಿ ದಟ್ಟ ಹೊಗೆ ತುಂಬಿಕೊಂಡಿತ್ತು. ನಾಲ್ಕೈದು ಜನ ಪ್ರಾಣ ಬಿಟ್ಟಿದ್ದರು ಎನ್ನುತ್ತಾರೆ ಮಂಜುನಾಥ್.
ಓದಿ: ಶಿವಮೊಗ್ಗ: ಬಾಂಬ್ ನಿಷ್ಕ್ರೀಯ ದಳದಿಂದ ಮೂರು ಶವಗಳ ಪತ್ತೆ
ಇನ್ನು ಗ್ರಾಮದ ಜಯನಾಯ್ಕ ಎಂಬುವವರು ಮಾತನಾಡಿ, ನಮ್ಮ ಗ್ರಾಮದಲ್ಲಿ ಬಹಳಷ್ಟು ಕ್ರಷರ್ಗಳಿವೆ. ಮೊದಲು ಕ್ರಷರ್ಗೆ ಅನುಮತಿ ಪಡೆಯುವ ಮಾಲೀಕರು, ತಕ್ಷಣ ಅಲ್ಲಿ ಕಲ್ಲು ಕ್ವಾರಿಯನ್ನು ಮಾಡಿಕೊಳ್ಳುತ್ತಾರೆ. ಅಕ್ರಮವಾಗಿ ಸ್ಫೋಟಕಗಳನ್ನಿಟ್ಟು ಬ್ಲಾಸ್ಟ್ ಮಾಡುತ್ತಾರೆ. ಇದರಿಂದ ನಮ್ಮೂರಿನ ವಾತಾವರಣವೇ ಹಾಳಾಗಿ ಹೋಗುತ್ತಿದೆ ಎಂದರು.
ನಿನ್ನೆ ಬಂದ ಶಬ್ದವನ್ನು ನಮ್ಮ ಜೀವನದಲ್ಲೇ ಕೇಳಿರಲಿಲ್ಲ. ಅಂತಹ ದೊಡ್ಡ ಶಬ್ದವದು. ಕಲ್ಲು ಗಣಿಗಾರಿಕೆಯಿಂದ ನಮ್ಮೂರು ಧೂಳುಮಯವಾಗಿದೆ. ಅಪಘಾತಗಳು ನಡೆಯುತ್ತಿವೆ. ರಸ್ತೆಯಲ್ಲಿ ಕಲ್ಲು ತುಂಬಿದ ಟಿಪ್ಪರ್ ಲಾರಿಗಳು ಜೋರಾಗಿ ಓಡಾಡುತ್ತವೆ. ಇದರಿಂದ ಕಲ್ಲುಗಳು ರಸ್ತೆಯಲ್ಲೆಲ್ಲಾ ಬೀಳಲು ಪ್ರಾರಂಭಿಸುತ್ತವೆ. ಇದರಿಂದ ರಸ್ತೆಯಲ್ಲಿ ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಬಗ್ಗೆ ದೂರು ನೀಡಿದ್ರೂ ಯಾವುದೇ ಪ್ರಯೋಜವಿಲ್ಲ. ಎಲ್ಲಾ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಜೇಬು ತುಂಬಿಸಿಕೊಳ್ತಾ ಇದ್ದಾರೆ ಎಂದು ದೂರಿದರು. ಕ್ರಷರ್ ಬಗ್ಗೆ ಪೊಲೀಸರು, ಪರಿಸರ ಇಲಾಖೆ ಸೇರಿದಂತೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಯಾವುದೇ ಕ್ರಮ ಜರುಗಿಸುವುದಿಲ್ಲ. ನಿನ್ನೆಯ ಸ್ಫೋಟದಿಂದ ನಾವೆಲ್ಲಾ ಸತ್ತೆವು ಎಂದುಕೊಂಡಿದ್ವಿ. ಆದರೆ ಅದು ಆಗಲಿಲ್ಲ ಎಂದರು.