ಶಿವಮೊಗ್ಗ: ಹೈಕೋರ್ಟ್ ತೀರ್ಪಿನ ಬಳಿಕವೂ ಅಲ್ಲಲ್ಲಿ ಹಿಜಾಬ್ ಕುರಿತಾದ ಗೊಂದಲಗಳು ಮುಂದುವರಿದಿವೆ. ಇಷ್ಟು ದಿನ ಪದವಿ ಕಾಲೇಜು, ಪಿಯು ಕಾಲೇಜುಗಳಿಗೆ ಹಿಜಾಬ್ ವಿವಾದ ಸೀಮಿತವಾಗಿತ್ತು. ಆದ್ರೀಗ ಇದು ನಗರದ ಸಿಮ್ಸ್ ಮೆಡಿಕಲ್ ಕಾಲೇಜ್ನಲ್ಲೂ ಆರಂಭವಾಗಿದೆ. ಇಂದು ಹಿಜಾಬ್ ಧರಿಸಿ, ಕೆಲ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿದ್ದ ವೇಳೆ ಗೊಂದಲ ಉಂಟಾಗಿದೆ ಎಂದು ತಿಳಿದುಬಂದಿದೆ.
ಸಿಮ್ಸ್ ಮೆಡಿಕಲ್ ಕಾಲೇಜಿಗೆ ಗುರುವಾರ ಹಿಜಾಬ್ ಧರಿಸಿ, ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಬಂದಿದ್ದರು. ಕಾಲೇಜು ಆಡಳಿತ ಮಂಡಳಿ ಅವರಿಗೆ ಹಿಜಾಬ್ ತೆಗೆದು ಒಳಗೆ ಬರುವಂತೆ ಹೇಳಿದೆ. ಇದಕ್ಕೆ ವಿದ್ಯಾರ್ಥಿನಿಯರು ಒಪ್ಪದಿದ್ದಾಗ, ಸೆಕ್ಯೂರಿಟಿ ಜೊತೆ ಕೆಲಕಾಲ ಮೆಡಿಕಲ್ ವಿದ್ಯಾರ್ಥಿನಿಯರು ವಾಗ್ವಾದ ನಡೆಸಿದ್ದಾರೆ.
ಇದನ್ನೂ ಓದಿ: ಯುನಿಫಾರ್ಮ್ ಬಣ್ಣದ ದುಪ್ಪಟ್ಟಾ ಧರಿಸುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಅವಕಾಶ ನೀಡಿ: ಸಿದ್ದರಾಮಯ್ಯ
ಕಳೆದ 2-3 ದಿನದಿಂದ ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆಯುವಂತೆ ಸೂಚನೆ ನೀಡಲಾಗಿತ್ತು. ಆದ್ರೆ ಹಿಂದಿನಂತೆಯೇ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿದ್ದರು. ಕಾಲೇಜು ಒಳಗೆ ಪ್ರವೇಶಿಸಲು ಅವಕಾಶ ನೀಡದಿದ್ದಾಗ, ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶ ನೀಡುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮನೆಗೆ ಹಿಂತಿರುಗಿದ್ದಾರೆ.