ಶಿವಮೊಗ್ಗ: ಗ್ರಾಮ ಸಹಾಯಕಿಯನ್ನು ಮಂಚಕ್ಕೆ ಕರೆದ ಭದ್ರಾವತಿ ತಹಶೀಲ್ದಾರ್ ಶಿವಕುಮಾರ್ನನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರನ್ನ ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.
![shimoga Thashildar suspend by DC](https://etvbharatimages.akamaized.net/etvbharat/prod-images/kn-smg-07-thashildar-suspend-vpkg-7204213_15092020004815_1509f_1600111095_262.jpg)
ಭದ್ರಾವತಿಯ ಸಿದ್ದಾಪುರ ಗ್ರಾಮ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆ ಸಂಬಳ ನೀಡುವಂತೆ ತಹಶೀಲ್ದಾರ್ ಬಳಿ ಮನವಿ ಮಾಡಿಕೊಂಡಿದ್ದಾಳೆ. ಈ ವೇಳೆ ತನ್ನೊಂದಿಗೆ ಸಹಕರಿಸಿದರೆ ಮಾತ್ರ ಸಂಬಳ ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾಳೆ. ಸಂತ್ರಸ್ತ ಮಹಿಳೆ ತಂದೆ ಅವಿನಾಶ್ ಇದೇ ಗ್ರಾಮದಲ್ಲಿ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಅನಾರೋಗ್ಯದ ಕಾರಣ ಸಂತ್ರಸ್ತೆಯ ಅಕ್ಕ ಆರಂಭದಲ್ಲಿ ಐದಾರು ತಿಂಗಳು ಕೆಲಸ ಮಾಡಿದರು. ಇದಾದ ಬಳಿಕ ಚೇತರಿಸಿಕೊಂಡ ಅವಿನಾಶ್ ಪುನಃ ಕೆಲಸಕ್ಕೆ ವಾಪಸ್ ಆಗಿದ್ದರು. ಆದರೆ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕಾರಣ ಕಳೆದ ಐದು ತಿಂಗಳಿನಿಂದ ಸ್ವಾತಿ ಎಂಬ ಮಹಿಳೆ ಕೆಲಸ ಮಾಡುತ್ತಿದ್ದಾರೆ.
ಸದ್ಯ ಅವಿನಾಶ್, ಸ್ವಾತಿ ಅಕ್ಕ ಹಾಗೂ ಸ್ವಾತಿಯ 15 ತಿಂಗಳ ಸಂಬಳ ಬರಬೇಕಾಗಿದ್ದು, ತಹಶೀಲ್ದಾರ್ ಬಳಿ ಹೋದಾಗ ನನ್ನ ಜೊತೆ ಸಹಕರಿಸಿದರೆ ಮಾತ್ರ ಸಂಬಳ ನೀಡುವುದಾಗಿ ತಿಳಿಸಿ, ತನ್ನ ಜಾಗಕ್ಕೆ ಬಾ ಎಂದು ಫೋನ್ನಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ದಲಿತ ಸಂಘಟನೆಗಳು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ವಿರುದ್ದ ದೂರು ದಾಖಲಿಸಿದ್ದಾರೆ.
ತಹಶೀಲ್ದಾರ್ ಶಿವಕುಮಾರ್ ವಿರುದ್ದ ಎಫ್ಐಆರ್ ಬಿಳುತ್ತಿದ್ದಂತೆಯೇ ಜಿಲ್ಲಾಧಿಕಾರಿ ಅವರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ತಹಶೀಲ್ದಾರ್ ಶಿವಕುಮಾರ್ನನ್ನು ಕೇವಲ ಕರ್ತವ್ಯದಿಂದ ಮಾತ್ರವಲ್ಲದೇ, ಕೆಲಸದಿಂದಲೇ ಅಮಾನತು ಮಾಡಿ, ಶೀಘ್ರವೇ ಬಂಧನ ಮಾಡುವಂತೆ ಭದ್ರಾವತಿ ಕೊಡ್ಲಿಗೆರೆಯ ಜಿ.ಪಂ. ಸದಸ್ಯ ಮಣಿಶೇಖರ್ ಆಗ್ರಹಿಸಿದ್ದಾರೆ.