ಶಿವಮೊಗ್ಗ : ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಸಾಗರ ತಾಲೂಕು ಭಾಗದಲ್ಲಿ ಕಳೆದ ಎರಡು ದಿನಗಳ ಹಿಂದೆ ವಿಪರೀತ ಮಳೆಯಾದ ಪರಿಣಾಮ ಸೈದೂರು, ಕಾನ್ಲೆಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಇದರಿಂದ ಸಂಚಾರ ಬಂದ್ ಆಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳಲು ಆಗದೆ ಮನೆಯಲ್ಲಿಯೇ ಉಳಿಯುವಂತಾಗಿದೆ.
ಮಳೆಯಿಂದಾಗಿ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಈ ತಿಂಗಳ ಮೊದಲ ಭಾಗದಲ್ಲಿ ತುಂಗಾ ಜಲಾಶಯದಿಂದ ಏತ ನೀರಾವರಿ ಮೂಲಕ ನೀರು ಹಾಯಿಸಲಾಗಿತ್ತು. ಈಗ ಹೊಸನಗರ ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು, ಕೋಡಿ ಬಿದ್ದು ಕುಮದ್ವತಿ ನದಿಗೆ ನೀರು ಹರಿದು ಬರುತ್ತಿರುವುದರಿಂದ ಅಂಜನಾಪುರ ಜಲಾಶಯ ಭರ್ತಿಯಾಗಿ ನೋಡಲು ಮನಮೋಹಕವಾಗಿದೆ. ಜಲಾಶಯ ಸುಮಾರು 22 ರಿಂದ 23 ಅಡಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ತಾಲ್ಲೂಕಿನ ರೈತರ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಜಲಾಶಯವು ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುತ್ತಿದ್ದು, ಈ ನೀರನ್ನು ರೈತರು ಅವಲಂಭಿಸಿದ್ದಾರೆ.
ತುಂಬಿ ಹರಿಯುತ್ತಿರುವ ವರದಾ ನದಿ : ನಿರಂತರ ಮಳೆ ಪರಿಣಾಮ ಚಂದ್ರಗುತ್ತಿ ಮತ್ತು ಜೋಳದಗುಡ್ಡೆ ಸಮೀಪದ ವರದಾ ನದಿಯ ನೀರು ದಿನದಿಂದ ದಿನಕ್ಕೆ ಏರುತ್ತಿದ್ದು, ಪ್ರವಾಹ ಏರಲಾರಂಭಿಸಿದೆ. ಹಾಗು ಅನೇಕ ಹಳ್ಳಗಳು ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಅನೇಕ ನದಿ ತೀರದ ಪ್ರದೇಶದಲ್ಲಿ ಭತ್ತದ ಗದ್ದೆಗಳು, ಬಾಳೆ ತೋಟ, ಅಡಿಕೆ ತೋಟಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆ ಉತ್ತಮವಾಗಿ ಬೀಳುತ್ತಿರುವುದರಿಂದ ರೈತರ ಹೊಲ-ಗದ್ದೆಗಳಲ್ಲಿ ನೀರು ನಿಂತಿದ್ದು, ಬಿತ್ತನೆಗೆ ತೊಡಕುಂಟಾದ ಪರಿಣಾಮ ರೈತ ಸಮೂಹ ಭರದಿಂದ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.
ವಿದ್ಯುತ್ ಉತ್ಪಾದನೆ ಆರಂಭ : ಏಷ್ಯಾದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡುವ ಲಿಂಗನ ಮಕ್ಕಿ ಜಲಾಶಯಕ್ಕೆ 24 ಗಂಟೆಯಲ್ಲಿ 4 ಅಡಿ ನೀರು ಹರಿದು ಬಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 1778.85 ಅಡಿ ಇದೆ. ಜಲಾಶಯಕ್ಕೆ 67,317 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1798 10 ಅಡಿ ದಾಖಲಾಗಿತ್ತು. ನೀರಿನ ಕೊರತೆಯಿಂದ ಸ್ಥಗಿತವಾಗಿದ್ದ ಲಿಂಗನಮಕ್ಕಿಯ ಶರಾವತಿ ವಿದ್ಯುತ್ಗಾರದಲ್ಲಿ ಪುನಃ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಿದೆ.
ದಂಡಾವತಿ ನದಿಗೆ ಬಾಗಿನ ಸಮರ್ಪಣೆ : ಸೊರಬ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗಂಗೆ ಪೂಜೆ ಸಲ್ಲಿಸಿ, ನಂತರ ಮೈದುಂಬಿದ ದಂಡಾವತಿ ನದಿಗೆ ಬಾಗಿನ ಸಮರ್ಪಿಸಲಾಗಿದೆ. ಇನ್ನೊಂದೆಡೆ ತುಂಗಾ ಜಲಾಶಯಯಿಂದ 60 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಹಾಗಾಗಿ ಇಂದು ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗಿಶ್ ತುಂಗಾ ನದಿಗೆ ಬಾಗಿನ ಅರ್ಪಿಸಿದರು.
ಈ ವೇಳೆ ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ ಎಸ್ ಚಿದಾನಂದಗೌಡ ಮಾತನಾಡಿ, ಮಳೆಯಾಗದೇ ರೈತರಲ್ಲಿ ಚಿಂತೆ ಮೂಡಿತ್ತು. ಇದೀಗ ದಂಡಾವತಿ ನದಿಗೆ ನೀರು ಬಂದಿರುವುದರಿಂದ ರೈತರಲ್ಲಿ ಸಂತಸ ತಂದಿದೆ. ಯಾವುದೇ ಅನಾಹುತ ಸೃಷ್ಟಿಯಾಗದೇ, ರೈತರಿಗೆ ಉತ್ತಮ ಬೆಳೆ ಕೈಸೇರಲಿ, ಬೆಳೆದ ಬೆಳೆಗೆ ಉತ್ತಮ ಬೆಲೆಯೂ ಲಭಿಸಲಿ ಎಂದು ಪ್ರಾರ್ಥಿಸಿ ಬಾಗಿನ ಅರ್ಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗೋ ಸಂರಕ್ಷಣಾ ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್, ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ, ಸಹ ಕಾರ್ಯದರ್ಶಿ ಶರತ್ ಸ್ವಾಮಿ, ಪ್ರಮುಖರಾದ ಬಂಗಾರಪ್ಪ ಶೇಟ್, ಗುರುಶಾಂತಪ್ಪ ಗೌಡ, ಸುಮನಾ ಚಿದಾನಂದ ಗೌಡ, ಪುಷ್ಪ ಸಿದ್ದಲಿಂಗೇಶ್ವರ ಗುತ್ತಿ, ಪ್ರವೀಣ್ ಕುಮಾರ್ ಸೇರಿದಂತೆ ಇತರರಿದ್ದರು.
ಜಿಲ್ಲೆಯ ಮಳೆಯ ಪ್ರಮಾಣದ ವರದಿ :
- ಶಿವಮೊಗ್ಗ: 25.50 ಮಿ.ಮೀ.
- ಭದ್ರಾವತಿ: 21.80 ಮಿ.ಮೀ
- ತೀರ್ಥಹಳ್ಳಿ: 78.00 ಮಿ.ಮೀ
- ಹೊಸನಗರ: 97.60 ಮಿ. ಮೀ
- ಸಾಗರ: 86.50 ಮಿ. ಮೀ
- ಸೊರಬ: 27.80 ಮಿ.ಮೀ
- ಶಿಕಾರಿಪುರ: 17.60 ಮಿ. ಮೀ
ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ :
ತುಂಗಾ ಅಣೆಕಟ್ಟು :
- ಗರಿಷ್ಠ ಮಟ್ಟ: 584.24 ಅಡಿ
- ಇಂದಿನ ನೀರಿನ ಮಟ್ಟ: 584.24 ಅಡಿ
- ಒಳ ಹರಿವು: 58.493 ಕ್ಯೂಸೆಕ್
- ಹೊರ ಹರಿವು: 58.453 ಕ್ಯೂಸೆಕ್
ಭದ್ರಾ ಅಣೆಕಟ್ಟು :
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ನೀರಿನ ಮಟ್ಟ: 152 ಅಡಿ
- ಒಳ ಹರಿವು: 31.425 ಕ್ಯೂಸೆಕ್
- ಹೊರ ಹರಿವು: 175 ಕ್ಯೂಸೆಕ್
ಲಿಂಗನಮಕ್ಕಿ ಅಣೆಕಟ್ಟು :
- ಗರಿಷ್ಠ ಮಟ್ಟ: 1819 ಅಡಿ
- ಇಂದಿನ ನೀರಿನ ಮಟ್ಟ: 1778.9 ಅಡಿ
- ಒಳ ಹರಿವು: 67.317 ಕ್ಯೂಸೆಕ್
- ಹೊರ ಹರಿವು: ಇಲ್ಲ.