ಶಿವಮೊಗ್ಗ : ಗ್ಯಾಸ್ ಸಿಲಿಂಡರ್ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಹೃತ್ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವಸ್ತುವಿನ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಜೀವನ ನಡೆಸದಂತೆ ಸಂಕಷ್ಟಕ್ಕೆ ಸಿಲುಕಿಸುತ್ತಿವೆ.
ಜನಸಾಮಾನ್ಯರಿಗೆ ಅಚ್ಛೇದಿನ್ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದು ಇಂದು ನರಕ ದರ್ಶನ ಮಾಡಿಸುತ್ತಿವೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗ್ಯಾಸ್ ಸಿಲಿಂಡರ್ ತಲೆ ಮೇಲೆ ಹೊತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಬಹೃತ್ ಪ್ರತಿಭಟನೆ ನಡೆಸಲಾಯಿತು.
ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿ ಕೊಡಬೇಕು. ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ದಿನೇದಿನೆ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿವೆ. ಆದರೆ, ಅದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಹಾಗೇಯೇ ಸರ್ಕಾರಗಳು ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಜನ ಸಾಮಾನ್ಯರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿವೆ. ಅಂತಹ ಜನ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಇಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.