ಶಿವಮೊಗ್ಗ: ಕೇಂದ್ರ ಸರ್ಕಾರ ಅಡಿಗೆ ಅನಿಲ ಹಾಗೂ ದಿನ ಬಳಕೆಯ ವಸ್ತುಗಳ ದರವನ್ನು ಏರಿಕೆ ಮಾಡುತ್ತಿರುವುದನ್ನು ಖಂಡಿಸಿ, ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಟಿಎಸ್ಬಿ ವೃತ್ತದಲ್ಲಿ ಮಹಿಳಾ ಕಾರ್ಯಕರ್ತರು, ಈರುಳ್ಳಿಯ ಹಾರ ಮಾಡಿಕೊಂಡು ಖಾಲಿ ಪಾತ್ರೆ ಹಿಡಿದು ಪ್ರತಿಭಟನೆ ನಡೆಸಿದರು. ಖಾಲಿ ಪಾತ್ರೆಯನ್ನು ಬಡಿದು ಶಬ್ದ ಮಾಡುತ್ತಾ, ರಸ್ತೆ ನಡುವೆ ಒಲೆ ಹಚ್ಚಿ ಕಟ್ಟಿಗೆಯಲ್ಲಿ ಅಡುಗೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಪ್ರತಿ ನಿತ್ಯ ಗ್ಯಾಸ್, ಡೀಸೆಲ್, ಪೆಟ್ರೋಲ್ ದರವನ್ನು ಏರಿಕೆ ಮಾಡುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರು ಬದುಕುವುದೇ ಕಷ್ಟಕರವಾಗುತ್ತಿದೆ. ಹಿಂದೆ ದೇಶದಲ್ಲಿ ಯಾವುದೇ ದರ ಏರಿಕೆಯಾದ್ರೂ ಸಹ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ಬಿಜೆಪಿಯವರು ಈಗ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ದರ ಏರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಆರ್ಥಿಕತೆ ಕುಸಿಯುತ್ತಿದೆ. ಅಡಿಗೆ ಅನಿಲ ಏರಿಕೆ ಮಾಡಿರುವುದರಿಂದ ನಾವು ಕಟ್ಟಿಗೆ ತಂದು ಅಡುಗೆ ಮಾಡುವ ಸ್ಥಿತಿ ಬಂದಿದೆ. ಈರುಳ್ಳಿಯನ್ನು ನೋಡಿದ್ರೆ ಸಾಕು ಕಣ್ಣೀರು ಬರುದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ವೇತಾ ಬಂಡಿ, ಕವಿತಾ ಸೇರಿದಂತೆ ಇತರರಿದ್ದರು.