ಶಿವಮೊಗ್ಗ : ಜಿಲ್ಲೆಯಲ್ಲಿ ವ್ಯಾಪಕವಾಗಿ ಕೋವಿಡ್ ಹರಡುತ್ತಿದ್ದು, ಅದನ್ನು ತಡೆಗಟ್ಟುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು, ಸಂಸದರು ವಿಫಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ಆರೋಪಿಸಿದರು.
ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಅಧಿಕಾರಿಗಳು ನೀಡಿದ ಅಂಕಿ-ಅಂಶಗಳನ್ನು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಶೋ ಕೊಟ್ಟು ಕಾಲ ಕಳೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಯಾವ ಆಸ್ಪತ್ರೆಗಳಲ್ಲಿಯೂ ಬೆಡ್ ಸಿಗುತ್ತಿಲ್ಲ, ವೆಂಟಿಲೇಟರ್, ಸರಿಯಾದ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲ ಎಂಬ ದೂರುಗಳು ಬರುತ್ತಿವೆ. ಇಂತಹ ಸಂದರ್ಭದಲ್ಲಿ ಆರು ಜನ ಶಾಸಕರು, ಸಂಸದರು ಸಮಾರಂಭಗಳನ್ನು ಮಾಡಿ ಶಾಲು ಹಾಕಿಸಿಕೊಳ್ಳುವುದನ್ನು ಬಿಟ್ಟು, ಜನರ ಸೇವೆ ಮಾಡಲಿ ಎಂದರು.
ಓದಿ : ಲಸಿಕೆ ನೀಡಲು ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ: ಕೆ ಎಸ್ ಈಶ್ವರಪ್ಪ
ಜಿಲ್ಲಾಧಿಕಾರಿಗಳು ಕೂಡಲೇ ಯಾವ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ಗಳಿವೆ, ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆಯಾ ಎಂಬುದನ್ನು ವಿವರಿಸಲಿ ಎಂದು ಆಗ್ರಹಿಸಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅತ್ಯಂತ ಕಳಪೆಯಾಗಿದ್ದು, ಭ್ರಷ್ಟಾಚಾರದಿಂದ ಕೂಡಿದೆ. ಈ ಬಗ್ಗೆ ಲೋಕಾಯುಕ್ತರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ದೂರು ಸಲ್ಲಿಸಲಾಗುವುದು ಎಂದು ಸುಂದರೇಶ್ ಹೇಳಿದರು.