ಶಿವಮೊಗ್ಗ: ಮಳೆಯ ಅಬ್ಬರದಲ್ಲಿ ಮನೆ ಮಠ ಕಳೆದುಕೊಂಡು ಸಂತ್ರಸ್ತರಾದ ಕುಟುಂಬಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ರಾಮಣ್ಣ ಶೆಟ್ಟಿ ಪಾರ್ಕ್ ಹತ್ತಿರದ ಗಣೇಶ ದೇವಸ್ಥಾನದಲ್ಲಿರುವ ಪರಿಹಾರ ಕೇಂದ್ರದಲ್ಲಿ ಆಹಾರ ಕಿಟ್ ವಿತರಿಸಲಾಯಿತು.
ಅಕ್ಕಿ, ಬೆಳೆ, ಎಣ್ಣೆ, ಬಿಸ್ಕೇಟ್ ಹಾಗೂ ಸೋಪುಗಳು ಇರುವ ಕಿಟ್ಗಳನ್ನ ನಿರಾಶ್ರಿತರ ಕುಟುಂಗಳಿಗೆ ವಿತರಿಸಲಾಯಿತು. ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದ್ರೇಶ್, ರಾಜ್ಯದಲ್ಲಿ ಭೀಕರ ಪ್ರವಾಹ ಹಾಗೂ ಮಳೆಯಿಂದಾಗಿ ಸಾವಿರಾರು ಕೋಟಿ ನಷ್ಟ ಆಗಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸುಮಾರು ಒಂದು ಸಾವಿರ ಕೋಟಿಗೂ ಹೆಚ್ಚು ನಷ್ಟ ಆಗಿದೆ. ಹಾಗಾಗಿ ಪರಿಹಾರವನ್ನು ತ್ವರಿತವಾಗಿ ನೀಡಬೇಕೆಂದು ಒತ್ತಾಯಿಸಿದರು.
ಪ್ರವಾಹದಿಂದ ರಾಜ್ಯ ತತ್ತರಿಸಿದರೂ ಕೂಡ ಪ್ರಧಾನಮಂತ್ರಿಗಳು ರಾಜ್ಯಕ್ಕೆ ಬಂದು ವೈಮಾನಿಕ ಸಮೀಕ್ಷೆ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಯಾವುದೇ ರಾಜಕೀಯ ಮಾಡದೇ ಮಾನವಿಯ ದೃಷ್ಟಿಯಿಂದ ನಾವು ಸರ್ಕಾರದ ಜೊತೆ ಸೇರಿ ಸಮಸ್ಯೆ ಬಗೆಹರಿಸೋಣ ಎಂದರು.