ಶಿವಮೊಗ್ಗ: ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಮುಳುಗಡೆಯಾದ ಜಮೀನಿಗೆ ಪರಿಹಾರವಾಗಿ ನೀಡಿದ್ದ ಭೂಮಿಗೆ ಹಕ್ಕನ್ನು ನೀಡದೇ ಸರ್ಕಾರ ಸತಾಯಿಸುತ್ತಿದೆ. ಇದರಿಂದ ಬೇಸತ್ತ ಶರಾವತಿ ಸಂತ್ರಸ್ಥರು ಶಿವಮೊಗ್ಗದ ಆಲ್ಕೊಳ ಸರ್ಕಲ್ನಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ತಮಗೆ ಭೂಮಿ ಹಕ್ಕು ನೀಡಬೇಕು ಎಂದು ಆಗ್ರಹಿಸಿದರು.
1962ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಾಗಿ ಮುಳುಗಡೆಯಾದವರಿಗೆ ಇದುವರೆಗೆ ಭೂಮಿಯ ಹಕ್ಕನ್ನೇ ನೀಡಿಲ್ಲ. ಜನರು ಮುಳುಗಡೆಯಾದಾಗ ಅವರಿಗಾಗಿ ಸರ್ಕಾರ ಭೂಮಿಯನ್ನೇನೋ ಗುರುತಿಸಿತು. ಅದರೆ ಸಂತ್ರಸ್ಥರಿಗೆ ಮೀಸಲಿಟ್ಟ ಜಾಗವನ್ನು ಬಳಿಕ ಅರಣ್ಯ ಇಲಾಖೆಗೆ ನೀಡಲಾಯಿತು. ಅಂದಿನಿಂದ ಇಂದಿನವರೆಗೆ ಶರಾವರಿ ಸಂತ್ರಸ್ಥರಿಗೆ ಭೂಮಿಯ ಹಕ್ಕೇ ಸಿಕ್ಕಿಲ್ಲ. ಇದರಿಂದ ಬೇಸತ್ತ ಶರಾವತಿ ಮುಳುಗಡೆ ಸಂತ್ರಸ್ಥರು ಇದೀಗ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಪಾದಯಾತ್ರೆ ನಡೆಸಿದ ಶರಾವತಿ ಸಂತ್ರಸ್ಥರು ತಮಗೆ ಕೂಡಲೇ ಭೂಮಿ ಹಕ್ಕು ನೀಡಬೇಕು. ಶರಾವತಿ ಮುಳುಗಡೆ ಸಂತ್ರಸ್ತರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು, ಲಿಂಗನ ಮಕ್ಕಿ ಅಣೆಕಟ್ಟು ನಿರ್ಮಾಣ ಮಾಡುವ ಮುನ್ನ 1959 ರಲ್ಲಿ ಮೈಸೂರು ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಅನುಷ್ಟಾನಗೊಳಿಸಬೇಕು ಎಂದು ಒತ್ತಾಯಿಸಿದರು.
60 ವರ್ಷಗಳಿಂದ ಒಂದಲ್ಲ ಒಂದು ದಿನ ತಮಗೆ ಭೂಮಿ ಹಕ್ಕು ಸಿಗುತ್ತದೆ ಎಂದು ಇದುವರೆಗೆ ಸುಮ್ಮನಿದ್ದ ಶರಾವತಿ ಸಂತ್ರಸ್ಥರು ಇದೀಗ ಹೋರಾಟದ ಹಾದಿ ಹಿಡಿದಿದ್ದಾರೆ. ಇನ್ನು ಹದಿನೈದು ದಿನದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಶರಾವತಿ ಹಾಗೂ ಮಹಾತ್ಮಾಗಾಂಧಿ ವಿದ್ಯುದಾಗಾರಕ್ಕೆ ಮುತ್ತಿಗೆ ಹಾಕಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಮರೆವಿನ ಕಾಯಿಲೆ ಇದೆ, ತೈಲ ತೆರಿಗೆ ಇಳಿಸಿದ್ದನ್ನು ಮರೆತುಬಿಟ್ಟಿದೆ : ಬಿಜೆಪಿ ಟ್ವಿಟೇಟು