ಶಿವಮೊಗ್ಗ: ಸಾಗರದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಸರ್ಕಾರದ ಕ್ರಮ ವಿರೋಧಿಸಿ ಕರೆ ನೀಡಿದ್ದ ಶಿವಮೊಗ್ಗ ಜಿಲ್ಲಾ ಬಂದ್ ಬಹುತೇಕ ಯಶಸ್ವಿಯಾಗಿದೆ.
ಶಿವಮೊಗ್ಗ ನಗರದಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ನಗರದ ಸೈನ್ಸ್ ಮೈದಾನದಿಂದ ಬಿ.ಹೆಚ್. ರಸ್ತೆಯ ಮೂಲಕ ಶಿವಪ್ಪ ನಾಯಕ ವೃತ್ತ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಯಿತು.
ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ರೈತ ಸಂಘದ ಕೆ.ಟಿ.ಗಂಗಾಧರ್, ಹೆಚ್.ಆರ್.ಬಸವರಾಜ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಂದ್ಗೆ ರೈತ ಸಂಘ ಸೇರಿದಂತೆ 40ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿದ್ದವು. ಇನ್ನು ಪ್ರತಿಭಟನೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗಿಯಾಗಿದ್ದರು. ಪ್ರತಿಭಟನೆ ವೇಳೆ ಮಳೆ ಬಂದ್ರು ಸಹ ಯಾರೂ ಕದಲದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಸಾಗರ, ಹೊಸನಗರ, ಶಿಕಾರಿಪುರ, ಸೊರಬ ಹಾಗೂ ತೀರ್ಥಹಳ್ಳಿಯಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್ ಆಗಿದ್ದವು. ಇನ್ನು ಬಸ್ ಸಂಚಾರ ಬೆಳಗ್ಗೆಯಿಂದಲೆ ಸ್ಥಗಿತವಾಗಿತ್ತು. ಸಾಗರದಲ್ಲಿ ಸಾಹಿತಿ ನಾ.ಡಿಸೋಜಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.