ಶಿವಮೊಗ್ಗ: ಸಾಗರ ತಾಲೂಕಿನ ಹೊಸಗುಂದದ ಶ್ರೀಕ್ಷೇತ್ರ ಉಮ ಮಹೇಶ್ವರ ದೇವಸ್ಥಾನದಲ್ಲಿ ಸೆ.23ರಂದು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ. ಶಂಕರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹೊಸಗುಂದ ಮಹೇಶ್ವರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಈ ಸಮ್ಮೇಳನ ನಡೆಯಲಿದೆ. ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸಮ್ಮೇಳನ ಉದ್ಘಾಟಿಸಲಿದ್ದು, ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಇನ್ನು ಶಾಸಕ ಎಚ್.ಹಾಲಪ್ಪ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದಲ್ಲಿ 3 ಗೋಷ್ಠಿಗಳು ನಡೆಯಲಿದ್ದು, ಗೋಷ್ಠಿಯ ಅಧ್ಯಕ್ಷತೆ ಮತ್ತು ಉದ್ಘಾಟನೆ ಮಕ್ಕಳೇ ನಡೆಸಿಕೊಡಲಿದ್ದಾರೆ. ಪ್ರತಿ ಗೋಷ್ಠಿಯಲ್ಲಿ ಆಶಯ ನುಡಿಯನ್ನು ಅನುಭವ ಶಿಕ್ಷಕರು ನುಡಿಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಹೊಸಗುಂದ ಮಹೇಶ್ವರ ಸೇವಾ ಟ್ರಸ್ಟ್‌ನ ವ್ಯವಸ್ಥಾಪಕ ಗಿರೀಶ್ ಕೋವಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಎಂ.ಎನ್. ಸುಂದರರಾಜ್, ರುದ್ರಮುನಿ ಎಸ್.ಸಜ್ಜನ್, ಮ.ಸ. ನಂಜುಂಡಸ್ವಾಮಿ, ಸುಮಿತ್ರಮ್ಮ, ಕೆ.ಡಿ.ರಮೇಶ್, ಕೆ.ಬಸವನ ಗೌಡ, ಹಸನ್ ಬೆಳ್ಳಿಗನೋಡು ಮತ್ತಿತರರು ಇದ್ದರು.