ಶಿವಮೊಗ್ಗ : ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ನಡೆಸಬೇಕಾದ್ರೆ ನಮ್ಮಲ್ಲಿ ಆತ್ಮಸ್ಥೈರ್ಯ ಇರಬೇಕು ಎಂದು ರಾಮಕೃಷ್ಣಾಶ್ರಮದ ವಿನಯಾನಂದ ಸ್ವಾಮೀಜಿ ಹೇಳಿದ್ದಾರೆ.
ಶಿವಮೊಗ್ಗ ತಾಲೂಕು ಕಲ್ಲುಗಂಗೂರಿನ ರಾಮಕೃಷ್ಣ ಆಶ್ರಮದ ವಿನಯಾನಂದ ಸ್ವಾಮೀಜಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಂದಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕೊರೊನಾ ಸೋಂಕು ನನಗೆ ಹೇಗೆ ತಗುಲಿತು ಎಂಬ ಬಗ್ಗೆ ನನಗೂ ಈಗಲೂ ತಿಳಿದಿಲ್ಲ. ನಾನು ಮೊದಲಿನಿಂದಲೂ ಆಯುರ್ವೇದದ ಬಗ್ಗೆ ಹೆಚ್ಚು ಒಲವನ್ನು ಇಟ್ಟುಕೊಂಡಿದ್ದೆ. ಇದರಿಂದ ನನಗೆ ಆಯುರ್ವೇದ ಚಿಕಿತ್ಸೆ ನೀಡಬೇಕು ಎಂದು ಪತ್ರ ಬರೆದಿದ್ದೆ, ತಡವಾದರೂ ಸಹ ಜಿಲ್ಲಾಧಿಕಾರಿಗಳು ನನಗೆ ಆಯುರ್ವೇದ ಚಿಕಿತ್ಸೆ ಸಿಗುವಂತೆ ಮಾಡಿದರು.
ಇದರಿಂದ ನಾನು ನಾಲ್ಕೇ ದಿನದಲ್ಲಿ ಗುಣಮುಖನಾದೆ. ಆಸ್ಪತ್ರೆಯಲ್ಲಿ ಇದ್ದಾಗ ವೈದ್ಯರು, ನರ್ಸ್ಗಳು ಸೋಂಕಿತರ ಹತ್ತಿರ ಬರಲು ಹೆದರುತ್ತಿದ್ದರು. ನಂತರ ನಾನೇ ಇತರೆ ಸೋಂಕಿತರ ಬಳಿ ಹೋಗಿ ಮಾತನಾಡಲು ಪ್ರಾರಂಭಿಸಿದೆ. ನಂತರ ವೈದ್ಯರು, ನರ್ಸ್ಗಳು ಸೋಂಕಿತರ ಬಳಿ ಬರಲು ಪ್ರಾರಂಭಿಸಿದರು ಎಂದರು.
ಕೊರೊನಾದಿಂದ ದೂರವಿರಲು ಪಂಚ ಸೂತ್ರಗಳನ್ನು ಅನುಸರಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದ್ದಾರೆ. ಈ ಪಂಚ ಸೂತ್ರಗಳೆಂದರೆ..
1) ಬಿಸಿ ಬಿಸಿ ನೀರನ್ನು ಗಂಟೆಗೊಮ್ಮೆ ಕುಡಿಯಬೇಕು.
2) ದಿನಕ್ಕೆ ಎರಡು ಹೊತ್ತು ತುಳಸಿ ಎಲೆ, ಕಾಳುಮೆಣಸು,ಕರಿಜಿರಿಗೆಯ ನೀರು ಕುಡಿಯಬೇಕು.
3) ಬಿಸಿ ನೀರಿಗೆ ಉಪ್ಪು ಹಾಕಿ ಗಂಟಲಲ್ಲಿ ಗಾರ್ಲಿನ್ ಮಾಡಬೇಕು.
4) 1 ಗಂಟೆ ಬೆವರು ಇಳಿಯುವ ಹಾಗೆ ವ್ಯಾಯಾಮ ಮಾಡಬೇಕು.
5) ರಾತ್ರಿ ಮಲಗುವ ಮುನ್ನಾ ಬಿಸಿಹಾಲಿಗೆ ಅರಿಶಿನ ಹಾಕಿಕೊಂಡು ಕುಡಿಯಬೇಕು ಎಂದರು. ಯಾರಿಗೆ ಯಾವ ಚಿಕಿತ್ಸೆ ಅವಶ್ಯಕವೋ ಅದನ್ನು ನೀಡಿದರೆ, ಬೇಗ ಕೊರೊನಾದಿಂದ ಗುಣಮುಖರಾಗಬಹುದು ಎಂದರು.