ಶಿವಮೊಗ್ಗ: ರೈಲ್ವೆ ಕಾಮಗಾರಿಗಾಗಿ ತೆಗೆದ ಗುಂಡಿಯಲ್ಲಿ ಬಿದ್ದು ಶಾಲಾ ಬಾಲಕಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಹೊರ ವಲಯದ ಕೋಟೆ ಗಂಗೂರು ಗ್ರಾಮದ ಬಳಿ ಬುಧವಾರ ನಡೆದಿದೆ. ಕೋಟೆ ಗಂಗೂರು ಗ್ರಾಮದ ಚೈತ್ರಾ ಎಂಬ ಐದನೇ ತರಗತಿ ಬಾಲಕಿ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಗ್ರಾಮದ ಹೊರ ಭಾಗದಲ್ಲಿ ರೈಲ್ವೆ ಇಲಾಖೆಯು ಗೂಡ್ಸ್ ಟರ್ಮಿನಲ್ ನಿರ್ಮಾಣ ಮಾಡುತ್ತಿದೆ. ಇದರ ಕಾಮಗಾರಿ ಭರದಿಂದ ಸಾಗಿದೆ.
ಮಳೆಯಿಂದ ಗುಂಡಿಯಲ್ಲಿ ನಿಂತಿರುವ ನೀರು: ರೈಲ್ವೆ ಟರ್ಮಿನಲ್ ನಿರ್ಮಾಣಕ್ಕಾಗಿ ರೈತರಿಂದ ಭೂಮಿಯನ್ನು ಪಡೆದು ಕಾಮಗಾರಿ ನಡೆಸಲಾಗುತ್ತಿದೆ. ಕೋಟೆ ಗಂಗೂರು ಮತ್ತು ಅಲ್ಲಿಂದ ಅನ್ಯ ಊರಿನ ಸಂಪರ್ಕ ಹಾಗೂ ತೋಟ, ಹೊಲಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಕಾಮಗಾರಿಗಾಗಿ ಆಳವಾದ ಗುಂಡಿಯನ್ನು ತೆಗೆಯಲಾಗಿದೆ. ಆದ್ರೆ ಅಲ್ಲಿ ಓಡಾಡುವ ಜನರ ರಕ್ಷಣೆಗೆ ಗುಂಡಿ ಬಳಿ ಅಗತ್ಯ ವ್ಯವಸ್ಥೆಯನ್ನು ಮಾಡಿಲ್ಲ. ಅದರ ಜೊತೆಗೆ ಮೊನ್ನೆ ಸುರಿದ ಭಾರಿ ಮಳೆಗೆ ಗುಂಡಿಯಲ್ಲಿ ನೀರು ನಿಂತಿದೆ.
ವಿದ್ಯಾರ್ಥಿನಿ ಚೈತ್ರಾ ಶಾಲೆಯಿಂದ ಸಂಜೆ ಮನೆಗೆ ಬಂದಿದ್ದು, ಆ ವೇಳೆ ಮನೆಗೆ ಬೀಗ ಹಾಕಲಾಗಿತ್ತು. ಚೈತ್ರಾ ಮನೆಯ ಬೀಗದ ಕೀ ತೆಗೆದುಕೊಂಡು ಬರಲು ತನ್ನ ತಂದೆ ಹಾಗೂ ತಾಯಿ ಕೆಲಸ ಮಾಡುತ್ತಿದ್ದ ಹೊಲದ ಕಡೆ ಹೋಗಿದ್ದಾಳೆ. ತಂದೆ ತಾಯಿಯಿಂದ ಬೀಗ ಪಡೆದು ವಾಪಸಾಗುತ್ತಿದ್ದಾಗ ಮಳೆ ನೀರು ನಿಂತಿದ್ದ ಆಳವಾದ ಗುಂಡಿಗೆ ಬಿದ್ದಿದ್ದಾಳೆ. ಮಳೆ ಸುರಿದು ಮಣ್ಣು ಮೆದುವಾಗಿದ್ದ ಕಾರಣ, ಮಣ್ಣು ಕುಸಿದು ಚೈತ್ರಾ ನೀರಿದ್ದ ಗುಂಡಿಗೆ ಬಿದ್ದಿದ್ದಾಳೆ.
ಮನೆಗೆ ಬಂದು ನೋಡಿದಾಗ ಪೋಷಕರಿಗೆ ಆಘಾತ; ಇತ್ತ ಕಡೆ ಚೈತ್ರಾಳ ತಂದೆ ಶ್ರೀನಿವಾಸ್ ಹಾಗೂ ಅವರ ಪತ್ನಿ ಮನೆಗೆ ಬಂದು ನೋಡಿದಾಗ ಮಗಳು ಚೈತ್ರಾ ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಪೋಷಕರ ಜೊತೆ ಗ್ರಾಮಸ್ಥರು ಸೇರಿ ಚೈತ್ರಾಗಾಗಿ ಹುಡುಕಿದ್ದಾರೆ. ರಾತ್ರಿ ವೇಳೆ ಗುಡುಕಾಡುತ್ತಿದ್ದಾಗ ಗುಂಡಿಯಲ್ಲಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಚೈತ್ರಾ ಪತ್ತೆಯಾಗಿದ್ದಾಳೆ. ಈ ಕುರಿತು ಬಾಲಕಿ ತಂದೆ ಶ್ರೀನಿವಾಸ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಮಹಿಳೆಯ ಶವಪತ್ತೆ: ಕೊಲೆ ಎಂದು ಸಂಬಂಧಿಕರ ಆರೋಪ