ಬೆಳಗಾವಿ: 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭವಿಷ್ಯ ನುಡಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆ ಬಳಸುತ್ತಿದ್ದ ವಾಹನ ಹಳೆಯದಾಗಿದ್ದರಿಂದ ಜನರ ಒತ್ತಾಯದ ಮೇರೆಗೆ ಅದನ್ನು ಬದಲಾವಣೆ ಮಾಡಿದ್ದೇನೆ.
ನೂತನ ವಾಹನ ಸಂಖ್ಯೆ 2023 ಎಂದಿದೆ, ಅದೊಂದು ಮಿಷನ್. 2023ರ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದ್ದು, ಕಾರ್ಯಕರ್ತರು ಹಾಗೂ ನನಗೆ ಪ್ರತಿ ಬಾರಿ ಎಚ್ಚರಿಕೆಯಾಗುವ ನಿಟ್ಟಿನಲ್ಲಿ 2023 ನಂಬರ್ ಪಡೆದಿದ್ದೇನೆ ಎಂದರು.
ಈಗಾಗಲೇ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಕೊರೊನಾ ವೈರಸ್ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಜನರು ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಲಾಕ್ಡೌನ್ ಒಂದೇ ಪರಿಹಾರವಲ್ಲ. ಮಹಾಮಾರಿ ಕೊರೊನಾಗೆ ಈವರೆಗೂ ಔಷಧ ಯಾರು ಕಂಡು ಹಿಡಿದಿಲ್ಲ. ಬೆಂಗಳೂರು ಲಾಕ್ಡೌನ್ ಮಾಡಿದ್ರೆ ಯಾವುದೇ ಉಪಯೋಗವಿಲ್ಲ ಎಂದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ರೆ, ಮನೆಯಲ್ಲಿದ್ದರೂ, ಹೊರಗಡೆಯಿದ್ದರೂ ಕೊರೊನಾ ಬರಲಿದೆ. ಜನರು ಸಾಮಾಜಿಕ ಅಂತರ ಹಾಗೂ ಸುರಕ್ಷತೆ ಕೈಗೊಳ್ಳುವುದು ಮುಖ್ಯವೇ ಹೊರತು, ಲಾಕ್ಡೌನ್ ಮಾಡಿ ಕೊರೊನಾ ನಿಯಂತ್ರಣ ಮಾಡುವುದು ಅಸಾಧ್ಯದ ಮಾತು ಎಂದರು. ಗೋಕಾಕ್ನಲ್ಲಿ ಐವರಿಗೆ ಕೊರೊನಾ ಬಂದಿದೆ. ಅದಕ್ಕೆ ಲಾಕ್ಡೌನ್ ಮಾಡಿದ್ರೆ ಅಲ್ಲಿನ ಜನರಿಗೆ ಉದ್ಯೋಗ ಯಾರು ಕೊಡುತ್ತಾರೆ. ಅವರನ್ನು ನೋಡಿ ಎಲ್ಲ ತಾಲೂಕಿನವರು ಮಾಡುತ್ತಾರೆ ಎಂದರು.