ಶಿವಮೊಗ್ಗ: ಸಂಕ್ರಾಂತಿ ಹಬ್ಬ ಬಂದರೆ ರೈತಾಪಿ ವರ್ಗದಲ್ಲಿ ಸುಗ್ಗಿ ಹಬ್ಬ ಮನೆ ಮಾಡುತ್ತದೆ. ಅದೇ ರೀತಿ ಶಿವಮೊಗ್ಗ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲೂ ಸಹ ಸಂಭ್ರಮ ಮನೆ ಮಾಡುತ್ತದೆ. ಬಿಇಡಿ ಕೋರ್ಸ್ ನಡೆಸುವ ಈ ಕಾಲೇಜಿನಲ್ಲಿ ಪ್ರತಿ ವರ್ಷ ಸಂಕ್ರಾಂತಿಯಂದು ಸುಗ್ಗಿ ಸಂಭ್ರಮವನ್ನು ಅತ್ಯಂತ ಧಾರ್ಮಿಕವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ನಂತರದಲ್ಲಿ ನಡೆಸುವ ಸುಗ್ಗಿ ಸಂಭ್ರಮಕ್ಕೆ ವಿದ್ಯಾರ್ಥಿಗಳೇ ಸಿಂಗಾರವನ್ನು ಮಾಡುತ್ತಾರೆ.
ರೈತರು ಹೇಗೆ ತಾವು ಬೆಳೆದ ಬೆಳೆಗಳಿಗೆ ಸುಗ್ಗಿ ಹಬ್ಬವನ್ನು ಮಾಡುತ್ತಾರೋ, ಅದೇ ರೀತಿ ವಿದ್ಯಾರ್ಥಿಗಳು ವಿವಿಧ ಧಾನ್ಯಗಳಿಂದ ಹಾಗೂ ಆಹಾರ ಧಾನ್ಯಗಳಿಂದ ಸಿಂಗಾರ ಮಾಡುತ್ತಾರೆ. ಭತ್ತದ ದೊಡ್ಡರಾಶಿ ಮಾಡಿ, ಅದರ ಮೇಲೆ ದೇವತೆಯನ್ನು ಕೂರಿಸಿ, ಕೆಳಗೆ ವಿವಿಧ ಧಾನ್ಯಗಳಾದ ಕಡ್ಲೆಕಾಳು, ಶೇಂಗಾ, ಹೆಸರುಕಾಳು, ಹೆಸರು ಬೇಳೆ, ಉದ್ದಿನಬೇಳೆ, ನವಣೆಗಳಿಂದ ಸಿಂಗಾರ ಮಾಡುತ್ತಾರೆ. ಅದರ ಮೇಲೆ ಕಬ್ಬನ್ನು ಇಟ್ಟು ಅಲಂಕಾರ ಮಾಡಲಾಗುತ್ತದೆ. ಅಲ್ಲದೇ, ವಿದ್ಯಾರ್ಥಿಗಳು ತಾವೇ ಒಂದು ಮರ ಮಾಡಿ, ಅದರಲ್ಲಿ ತಮ್ಮ ಕಾಲೇಜಿನ ಎಲ್ಲ ಉಪನ್ಯಾಸಕರ ಭಾವಚಿತ್ರಗಳನ್ನು ಅಂಟಿಸಿ, ಅವರುಗಳ ನೆರಳಿನಲ್ಲಿ ನಾವು ಎಂಬ ವಿಷಯದಡಿ ತಯಾರಿಸಿದ ವಿವಿಧ ಕ್ರಾಫ್ಟ್ ವರ್ಕ್ಗಳನ್ನು ನಿರ್ಮಾಣ ಮಾಡಿದ್ದರು.
ಇಂದಿನ ಸುಗ್ಗಿ ಸಂಭ್ರಮಕ್ಕೆ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಸೆಲ್ವಮಣಿ ಅವರು ಆಗಮಿಸಿದ್ದರು. ಅವರನ್ನು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದವರು ಡೊಳ್ಳಿನ ಮೇಳದೊಂದಿಗೆ ಸ್ವಾಗತ ಮಾಡಿದರು. ಸುಗ್ಗಿ ರಾಶಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಎಲ್ಲ ಪ್ರಶಿಕ್ಷಣಾರ್ಥಿಗಳು ಸಂಸ್ಕೃತಿ ಧಿರಿಸಿನಲ್ಲಿ ಆಗಮಿಸಿದ್ದರು. ಇದೇ ವೇಳೆ, ವಿದ್ಯಾರ್ಥಿನಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟರು.
ಕಾಲೇಜಿನ ಸುಗ್ಗಿ ಸಂಭ್ರಮದ ಹಬ್ಬದ ಕುರಿತು ಮಾತನಾಡಿದ ವಿದ್ಯಾರ್ಥಿನಿ ಸ್ಪಂದನಾ ಅವರು, ಸುಗ್ಗಿ ಸಂಭ್ರಮವನ್ನು ಅತ್ಯಂತ ಸಂಭ್ರಮದಿಂದ ಹಾಗೂ ಸಂಸ್ಕೃತಿಯಿಂದ ಆಚರಿಸಲಾಗುತ್ತಿದೆ. ಎಲ್ಲ ಧಾನ್ಯಗಳಿಂದ ರಾಶಿ ಮಾಡಿ, ದೇಶದಲ್ಲಿ ಹೇಗೆ ಸುಗ್ಗಿಯನ್ನು ಆಚರಣೆ ಮಾಡಲಾಗುತ್ತದೆಯೋ, ಅದೇ ರೀತಿ ನಾವು ಸಹ ಅಚರಣೆ ಮಾಡುತ್ತಿದ್ದೇವೆ. ಭತ್ತದ ರಾಶಿ ಮಾಡಿ, ಅದರ ಮೇಲೆ ದೇವತೆಯನ್ನು ಕೂರಿಸಲಾಗಿದೆ. ಎಲ್ಲ ರೀತಿಯ ಧಾನ್ಯದಲ್ಲಿ ಸಿಂಗಾರ ಮಾಡಲಾಗಿದೆ. ಅದೇ ರೀತಿ ಕಬ್ಬನ್ನು ಇಟ್ಟು ಸುಗ್ಗಿ ಹಬ್ಬವನ್ನು ಆಚರಿಸಲಾಗುತ್ತಿದೆ. ಜೊತೆಗೆ ಪ್ರಶಿಕ್ಷಣಾರ್ಥಿಗಳೇ ಸೇರಿ ಪೇಪರ್ ಕಟ್ಟಿಂಗ್ಸ್ ಮಾಡಲಾಗಿದೆ. ಇದರಿಂದ ನಾವು ಮುಂದೆ ಮಕ್ಕಳಿಗೆ ದೇಶದ ಸಂಸ್ಕೃತಿ, ಧರ್ಮದ ಬಗ್ಗೆ ತಿಳಿಸಲು ಸಹಾಯಕವಾಗುತ್ತದೆ ಎಂದರು.
ಉಪನ್ಯಾಸಕರು ಸಹಕಾರ ನೀಡುತ್ತಿದ್ದಾರೆ: ಇದೇ ವೇಳೆ ಮಾತನಾಡಿದ ಕಾಲೇಜಿನ ಪ್ರಶಿಕ್ಷಣಾರ್ಥಿಯಾದ ಕೃತಿ ಮಾತನಾಡಿ, ಇಂದು ನಮ್ಮ ಕಾಲೇಜಿನಲ್ಲಿ ಸುಗ್ಗಿ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಇದು ನಮ್ಮ ದೇಶದ ಸಾಂಸ್ಕೃತಿಕ ವೈಭವವನ್ನು ತೋರುತ್ತದೆ. ರೈತರಿಗೆ ಈ ಕಾರ್ಯಕ್ರಮವನ್ನು ಅರ್ಪಿಸುತ್ತಿದ್ದೇವೆ. ರೈತರು ಹೇಗೆ ತಮ್ಮ ಬೆಳೆಗಳನ್ನು ರಾಶಿ ಮಾಡಿ ಸುಗ್ಗಿ ಮಾಡುತ್ತಾರೋ, ಅದೇ ರೀತಿ ನಾವು ಸಹ ಸುಗ್ಗಿ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ನಮ್ಮ ಕಾಲೇಜಿನಲ್ಲಿ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ನಮ್ಮಕಾಲೇಜಿನ ಎಲ್ಲಾ ಉಪನ್ಯಾಸಕರು ಸಹ ಸಹಕಾರವನ್ನು ನೀಡುತ್ತಿದ್ದಾರೆ ಎಂದರು.
ಪೇಪರ್ನಿಂದ ವಿವಿಧ ಕಲೆಗಳನ್ನು ಅರಳಿಸಿದ್ದಾರೆ: ಕಾಲೇಜಿನ ಶಿಕ್ಷಕರಾದ ಪ್ರಕಾಶ್ ಅವರು ಮಾತನಾಡಿ, ನಮ್ಮ ಕಾಲೇಜಿನಲ್ಲಿ ಪ್ರತಿವರ್ಷ ಸಂಕ್ರಾಂತಿ ಹಬ್ಬದಂದು ಸುಗ್ಗಿ ಸಂಭ್ರಮವನ್ನು ಆಚರಿಸುತ್ತೇವೆ. ಎರಡು ವರ್ಷ ಬಿಇಡ್ ಕೋರ್ಸ್ ಮುಗಿಸುವ ಪ್ರಶಿಕ್ಷಣಾರ್ಥಿಗಳು ಮುಂದೆ, ಶಿಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಸಮಾಜದಲ್ಲಿ ತಮ್ಮದೇ ಆದ ಪರಿಣತಿ ವ್ಯಕ್ತಪಡಿಸುತ್ತಿದ್ದಾರೆ. ಸುಗ್ಗಿ ಸಂಭ್ರಮವನ್ನು ಆಚರಿಸುವುದರ ಮೂಲಕ ಭಾರತೀಯ ಸಂಸ್ಕೃತಿ ಮತ್ತು ನಮ್ಮ ಧಾರ್ಮಿಕ ನಂಬಿಕೆಗಳು ಹಾಗೂ ಸಂಪ್ರದಾಯಗಳ ಬಗ್ಗೆ ತಿಳಿಸಿ, ನಮ್ಮ ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಕಲಿಸುವ ಕಾರ್ಯಕ್ರಮ ಇದಾಗಿದೆ. ಪ್ರಶಿಕ್ಷಣಾರ್ಥಿಗಳು ತಮ್ಮದೇ ಆದ ಕೈಯಲ್ಲಿ ಪೇಪರ್ನಿಂದ ವಿವಿಧ ಕಲೆಗಳನ್ನು ಅರಳಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಧಾರವಾಡ: ಮಹಿಳೆಯರಿಂದ ಕಲರ್‌ಫುಲ್ ಸಂಕ್ರಾಂತಿ ಆಚರಣೆ