ಶಿವಮೊಗ್ಗ: ಶಿವಮೊಗ್ಗ ರಂಗಾಯಣದ ನೂತನ ನಿರ್ದೇಶಕರಾಗಿ ತೀರ್ಥಹಳ್ಳಿಯ ಸಂದೇಶ್ ಜವಳಿ ಇಂದು ಅಧಿಕಾರ ಸ್ವೀಕಾರ ಮಾಡಿದರು.
ಶಿವಮೊಗ್ಗ ನಗರದ ಸಾಂಸ್ಕೃತಿಕ ರಂಗಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂದೇಶ್ ಜವಳಿರವರು ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದಿನ್ ರವರಿಂದ ಅಧಿಕಾರ ಸ್ಚೀಕಾರ ಮಾಡಿದರು. ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ, ರಂಗಕರ್ಮಿಯಾಗಿರುವ ಸಂದೇಶ್ ಜವಳಿರವರ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿ ಹಲವು ರಂಗಕರ್ಮಿಗಳು ಆಗಮಿಸಿದ್ದರು.
ಹಲವು ನಾಟಕಗಳಲ್ಲಿ ಅಭಿನಯಿಸಿರುವ ಸಂದೇಶ್ ಜವಳಿ ತೀರ್ಥಹಳ್ಳಿ ತಾಲೂಕಿನ ನಾಟಕ ರಂಗಕ್ಕೆ ತಮ್ಮದೆ ಆದ ಕೂಡುಗೆಗಳನ್ನು ನೀಡಿದ್ದಾರೆ. ಕಳೆದ 30 ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಇವರು ಶಿವಮೊಗ್ಗ ರಂಗಾಯಣವನ್ನು ರಾಜ್ಯದಲ್ಲಿಯೇ ಮಾದರಿ ರಂಗಾಯಣವನ್ನಾಗಿ ಮಾಡಲಿ ಎಂದು ಎಲ್ಲರೂ ಹಾರೈಸಿದರು.
ರಾಹುಕಾಲ ಮುಗಿದ ಮೇಲೆ ಅಧಿಕಾರ ಸ್ವೀಕಾರ: ಸಾಂಸ್ಕೃತಿಕ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂದೇಶ್ ಜವಳಿರವರಿಗೆ ಶಫಿ ಸಾದುದ್ದಿನ್ ರವರು ಹೂ ಗುಚ್ಚ ನೀಡಿ ಅಧಿಕಾರ ಹಸ್ತಾಂತರ ಮಾಡುವಾಗ ಶಾಸಕ ಆರಗ ಜ್ಞಾನೇಂದ್ರ ರವರು ರಾಹುಕಾಲ ಮುಗಿದ ಮೇಲೆ ಅಧಿಕಾರ ಸ್ವೀಕಾರ ಮಾಡಿ ಎಂದು ಜವಳಿ ರವರಿಗೆ ತಿಳಿಸಿದರು. ಇದರಿಂದ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಮಾತನಾಡಿದ ಮೇಲೆ ಸಂದೇಶ್ ಜವಳಿ ರವರು ಅಧಿಕಾರ ಸ್ವೀಕಾರ ಮಾಡಿದರು.
ಈ ವೇಳೆ ಈ ಟಿವಿ ಭಾರತದೊಂದಿಗೆ ಮಾತನಾಡಿದ ಸಂದೇಶ್ ಜವಳಿ ರವರು, ರಂಗಾಯಣವನ್ನು ಜನ ಸಾಮಾನ್ಯರ ಬಳಿಗೆ ತೆಗೆದು ಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ, ಇಲ್ಲಿನ ನಾಟಕಗಳನ್ನು ಸರಳೀಕರಣಗೊಳಿಸಿ ಜನ ಸಾಮಾನ್ಯರಿಗೂ ಸಹ ತಿಳಿಯುವಂತೆ ಮಾಡುವ ಪ್ರಯತ್ನವಿದೆ. ಸಾಂಸ್ಕೃತಿಕ ಭವನದಲ್ಲಿನ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುತ್ತೇನೆ, ಇಲ್ಲಿ ಒಂದು ಬಯಲು ರಂಗ ಮಂದಿರ ನಿರ್ಮಾಣಕ್ಕೆ ಹಾಗೂ ಹವ್ಯಾಸಿ ಕಲಾವಿದರಿಗೆ ರಂಗತಾಲೀಮು ನಡೆಸಲು ಅವಶ್ಯಕವಾದ ಜಾಗ ಸೇರಿದಂತೆ ಎಲ್ಲವನ್ನು ಮಾಡುವ ಯೋಜನೆ ಇದೆ ಎಂದರು.
ಅಲ್ಲದೇ ಮಕ್ಕಳನ್ನು ರಂಗಭೂಮಿಯ ಕಡೆ ಕರೆದು ಕೊಂಡು ಬರಲು ತೀರ್ಮಾನ ಮಾಡಲಾಗಿದೆ. ರಂಗಾಯಣದಲ್ಲಿ ಹೊಸ ಕೋರ್ಸ್ ಗಳನ್ನು ಪ್ರಾರಂಭಿಸುವ ಚಿಂತನೆ ಇದೆ ಎಂದರು.