ಶಿವಮೊಗ್ಗ: ಸುನೀಲ್ ನನ್ನನ್ನು ಪಿಡಿಸುತ್ತಿದ್ದ, ಹಿಜಾಬ್ ತೆಗೆಯುವಂತೆ ಒತ್ತಾಯಿಸುತ್ತಿದ್ದ. ಇದರಿಂದ ನನ್ನ ಅಣ್ಣ ಸಮೀರ್ ಸುನೀಲನಿಗೆ ಹೆದರಿಸಲು ಹೋಗಿರಬೇಕು ಎಂದು ಸಮೀರ್ ಸಹೋದರಿ ಸಭಾ ಶೇಖ್ ಹೇಳಿದ್ದಾರೆ. ಸಾಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಹಿಜಾಬ್ ಗಲಾಟೆ ನಂತರ ಸುನೀಲ್ ನನ್ನನ್ನು ಪೀಡಿಸುತ್ತಿದ್ಧ. ಇದರಿಂದ ನನ್ನ ಅಣ್ಣ ಸಮೀರ್ ಹೆದರಿಸಲು ಹೋಗಿರಬೇಕು ಅಷ್ಟೆ, ಸಮೀರ್ ಯಾರನ್ನೂ ಹೊಡೆಯುವುದು, ಬಡಿಯುವುದು ಮಾಡಿದವನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಮೀರ್ ವಿರುದ್ಧ ಯಾವುದೇ ಪ್ರಕರಣ ಇದುವರೆಗೆ ಇರಲಿಲ್ಲ. ಆತ ಯಾವ ಸಂಘಟನೆಗೂ ಸೇರಿದವನಲ್ಲ. ಆತನ ವಿರುದ್ದ ಈಗ ಪೊಲೀಸರು ಏನೆನೋ ಹೇಳುತ್ತಿದ್ದಾರೆ. ನನಗೆ ತಂದೆ ಇಲ್ಲ. ಸಮೀರ್ ಬೆಂಗಳೂರಿನಲ್ಲಿ ಇರುತ್ತಾನೆ. ಸಾಗರಕ್ಕೆ ಆಗಾಗ್ಗೆ ಬಂದು ಹೋಗುತ್ತಿರುತ್ತಾನೆ ಎಂದು ಸಭಾ ಶೇಖ್ ಅಳುತ್ತಾ ಹೇಳಿದ್ದಾರೆ.
ನಂತರ ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡ ಫಾರೂಕಿ ಶೇಖ್ ಅವರು, ಸಮೀರ್ ಕುಟುಂಬ ನನಗೆ ಹಿಂದಿನಿಂದಲೂ ಪರಿಚಯವಾಗಿದೆ. ನಿನ್ನೆಯ ಘಟನೆ ಬಗ್ಗೆ ಸಮೀರ್ ಚಿಕ್ಕಪ್ಪ ಮಾಹಿತಿ ಕೊಟ್ಟಿದ್ದರು. ನಿನ್ನೆ ಘಟನೆ ತೀರಾ ವೈಯಕ್ತಿಕ ಗಲಾಟೆಯಾಗಿದೆ. ಇದಕ್ಕೆ ಬೇರೆ ಬಣ್ಣ ಹಚ್ಚುವುದು ಬೇಡ ಎಂದು ಮನವಿ ಮಾಡಿದ್ದಾರೆ. ತನ್ನ ತಂಗಿಗೆ ಪೀಡಿಸುತ್ತಿದ್ದರಿಂದ ಸಮೀರ್ ಸಿಟ್ಟಿಗೆದ್ದಿದ್ದ. ಘಟನೆ ಬಗ್ಗೆ ಗೊತ್ತಾದ ನಂತರ ನಾವೇ ಆತನನ್ನು ಸಂಪರ್ಕಿಸಿ ಪೊಲೀಸರಿಗೆ ಶರಣಾಗಲು ಹೇಳಿದ್ದೆವು. ಅದರಂತೆ ಆತನೇ ಖುದ್ದಾಗಿ ಎಸ್ಪಿ ಕಚೇರಿಗೆ ಹೋಗಿ ಶರಣಾಗಿದ್ದಾನೆ ಎಂದು ಘಟನೆಯ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಎಸ್ಪಿ ಹೇಳಿದ್ದೇನು?: ಮತ್ತೊಂದೆಡೆ ಪ್ರಕರಣದ ವಿಚಾರಣೆ ಬಗ್ಗೆ ಶಿವಮೊಗ್ಗ ಎಸ್ಪಿ ಸ್ಪಷ್ಟನೆ ನೀಡಿದ್ದಾರೆ. ಸಾಗರ ಪಟ್ಟಣದ ಬಜರಂಗದಳದ ಸಹ ಸಂಚಾಲಕ ಸುನೀಲ್ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು. ಈ ಕುರಿತು ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ’’ಸಮೀರ್(ಎ1), ಇಮಿಯಾನ್ ಹಾಗೂ ಮನ್ಸೂರ್ ಎಂಬುವವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಹಲ್ಲೆ ಪ್ರಕರಣದ ಎ1 ಆರೋಪಿ ಸಮೀರ್ ಎಂಬಾತನ ತಂಗಿಯನ್ನು ಸುನೀಲ್ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದ. ಈ ಹಿನ್ನೆಲೆ ಹಲ್ಲೆ ಮಾಡಿರುವುದಾಗಿ ತನಿಖೆ ವೇಳೆ ಸಮೀರ್ ಬಾಯ್ಬಿಟ್ಟಿದ್ದಾನೆ‘‘ ಎಂದು ತಿಳಿಸಿದ್ದಾರೆ.
’’ತಂಗಿಯನ್ನು ಚುಡಾಯಿಸುತ್ತಿರುವ ಬಗ್ಗೆ ಸುನೀಲ್ಗೆ ಸಮೀರ್ ಎಚ್ಚರಿಕೆ ನೀಡಿದ್ದ. ಅಲ್ಲದೇ ತಂಗಿಯ ನಂಬರ್ ಕೊಡು ಅಂತ ಸಮೀರ್ಗೆ ಸುನೀಲ್ ಕೇಳಿದ್ದನಂತೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಚುಡಾಯಿಸುವುದನ್ನು ನಿಲ್ಲಿಸಿರಲಿಲ್ಲ. ಅದರಂತೆಯೇ ಸೋಮವಾರ ಬೈಕ್ನಲ್ಲಿ ಬರುತ್ತಿದ್ದ ಸಮೀರ್ನನ್ನು ಸುನೀಲ್ ರೇಗಿಸಿದ್ದ. ಇದರಿಂದ ಕೋಪಗೊಂಡ ಸಮೀರ್ ತನ್ನ ಬೈಕಿನಲ್ಲಿದ್ದ ಮಚ್ಚು ತೆಗೆದುಕೊಂಡು ಹಲ್ಲೆಗೆ ಯತ್ನಿಸಿರುವುದಾಗಿ ತನಿಖೆ ವೇಳೆ ಹೇಳಿದ್ದಾನೆ. ಅಲ್ಲದೇ ಸಮೀರ್ ಒಬ್ಬ ಕುರಿಗಾಹಿ ಯುವಕನಾಗಿದ್ದು, ಎಂದಿನಂತೆ ಕುರಿಗಳಿಗೆ ಸೊಪ್ಪು ತರಲು ಬೈಕಿನಲ್ಲಿ ಕತ್ತಿಯನ್ನು ಇಟ್ಟುಕೊಂಡಿದ್ದ. ಅದರಿಂದಲೇ ಹಲ್ಲೆಗೆ ಮುಂದಾಗಿದ್ದಾನೆ‘‘ ಎಂದು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಸ್ನೇಹಿತರಾದ ಇಮಾಯಿನ್ ಮತ್ತು ಮನ್ಸೂರ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದಲ್ಲಿ ಇವರ ಪಾತ್ರ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿ ವಿಚಾರಣೆ ಬಳಿಕವಷ್ಟೇ ತಿಳಿಯಲಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಇಂದು ಸಾಗರ ಬಂದ್: ಇನ್ನೊಂದೆಡೆ ಸುನೀಲ್ ಹಲ್ಲೆ ಯತ್ನ ಪ್ರಕರಣ ಖಂಡಿಸಿ ಇಂದು ಸಾಗರ ಬಂದ್ಗೆ ಕರೆ ನೀಡಲಾಗಿತ್ತು. ಈ ಹಿನ್ನೆಲೆ ಪಟ್ಟಣದಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಬಂದ್ ನಡೆಯಿತು. ಪಟ್ಟಣದ ಎಲ್ಲ ಅಂಗಡಿ - ಮುಂಗಟ್ಟುಗಳು ವ್ಯಾಪಾರ ಸ್ಥಗಿತಗೊಳಿ ಪ್ರತಿಭಟನೆ ನಡೆಸಲಾಯಿತು.
ಓದಿ: ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನ.. ಮೂವರು ಖಾಕಿ ಬಲೆಗೆ