ಶಿವಮೊಗ್ಗ: ಬೆಳಗಾವಿ ನಗರದ ಹಿಂಡಲಗಾ ರಸ್ತೆಯ ವನಿತಾ ವಿದ್ಯಾಲಯ ಬಳಿಯ ಡಬಲ್ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆ ಚುರುಕುಗೊಂಡಿದೆ. ಆಪರೇಷನ್ ಚೀತಾ ಕಾರ್ಯಾಚರಣೆಗೆ ಶಿವಮೊಗ್ಗದ ಸಕ್ರೆಬೈಲಿನ ಅಲೆ ಹಾಗೂ ನೇತ್ರಾವತಿ ಆನೆಗಳು ಬೆಳಗಾವಿಗೆ ಪ್ರಯಾಣ ಬೆಳೆಸಿವೆ.
ಇಂದು ಸಂಜೆ ಸಕ್ರೆಬೈಲಿನ ಆನೆ ಕ್ಯಾಂಪ್ ಇಂದ ಆನೆ ಮಾವುತರು, ಕಾವಾಡಿಗಳು ಎರಡು ಆನೆಗಳ ಜೊತೆ ಪ್ರಯಾಣ ಬೆಳೆಸಿದ್ದಾರೆ. ಇವರೂಂದಿಗೆ ಡಾಟಿಂಗ್ ಮಾಡುವ ಪ್ರಾವಿಣ್ಯವನ್ನು ಹೊಂದಿರುವ ಪಶುವೈದ್ಯ ವಿನಯ್ ಅವರು ಈ ತಂಡದ ನೇತೃತ್ವವನ್ನು ವಹಿಸಿದ್ದಾರೆ. ಆನೆಗಳು ಎರಡು ಲಾರಿಯಲ್ಲಿ ಪ್ರಯಾಣ ಬೆಳೆಸಿವೆ. ಇಂದು ಪ್ರಯಾಣ ಬೆಳೆಸಿರುವ ಆನೆಗಳು ಮಧ್ಯರಾತ್ರಿ ಬೆಳಗಾವಿ ಸೇರುವ ನಿರೀಕ್ಷೆ ಇದ್ದು, ನಾಳೆ ಅಥವಾ ನಾಡಿದ್ದು ಆಪರೇಷನ್ ಚೀತಾ ಕಾರ್ಯಾಚರಣೆ ನಡೆಯುವ ಸಾಧ್ಯತೆಯಿದೆ.
ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಹೈ ಅಲರ್ಟ್ ಆಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆ ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದರು. ಸೋಮವಾರದಂದು ಚಿರತೆ ಇರುವ ಜಾಗವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಸಿಬ್ಬಂದಿ, ಅರವಳಿಕೆ ತಜ್ಞರು ಸಿಡಿಮದ್ದು ಮತ್ತು ಬಲೆಗಳನ್ನು ಹಿಡಿದುಕೊಂಡು ಚಿರತೆ ಸೆರೆಗೆ ಮುಂದಾಗಿದ್ದರು. ಈ ವೇಳೆ ಅರಣ್ಯ ಇಲಾಖೆಯ ದಿಕ್ಕು ತಪ್ಪಿಸಿ ಚಿರತೆ ಕ್ಯಾಂಪ್ ಪ್ರದೇಶದಿಂದ ಮತ್ತೆ ಗಾಲ್ಫ್ ಮೈದಾನದ ಒಳಗೆ ಓಡಿ ಹೋಗಿದೆ.
ಇದನ್ನೂ ಓದಿ: ಬೆಳಗಾವಿ ಚಿರತೆ ಸೆರೆಗೆ ಬರಲಿವೆ ಸಕ್ರೆಬೈಲ್ ಆನೆಗಳು..
ಕಳೆದ ಆಗಸ್ಟ್ 5 ರಂದು ಚಿರತೆ ಪತ್ತೆಯಾಗಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿತ್ತು. ನಿನ್ನೆ ಮತ್ತೆ ಚಿರತೆ ಪತ್ತೆಯಾಗಿದೆ. ಕಳೆದ 20 ದಿನಗಳಲ್ಲಿ ಜಿಲ್ಲೆಯ ನಾಲ್ಕು ಕಡೆ ಚಿರೆತೆಗಳ ಹಾವಳಿ ಕಂಡು ಬಂದಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. 120 ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ 80 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.