ಶಿವಮೊಗ್ಗ : ಮನೆಯಲ್ಲಿ ಮಲಗಿದ್ದ ತಾಯಿ ಮತ್ತು ಮಗನನ್ನು ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆಗೆ ಇದೀಗ ಅನುಮಾನಗಳು ವ್ಯಕ್ತವಾಗುತ್ತಿದೆ.
ಹೌದು.. ಸಾಗರ ತಾಲೂಕಿನ ಕಸಕಸೆಕೊಡ್ಲು ಗ್ರಾಮದಲ್ಲಿ ಒಂಟಿ ಮನೆಯಲ್ಲಿ ಬಂಗಾರಮ್ಮ(65) ಹಾಗೂ ಪ್ರವೀಣ್(36) ಎಂಬುವವರ ಕೊಲೆಯಾಗಿದೆ.
ಇವರು ಮನೆಯಲ್ಲಿ ಮಲಗಿದ್ದ ವೇಳೆ ಅಪರಿಚಿತನೊಬ್ಬ ಮನೆಗೆ ನುಗ್ಗಿ ಪ್ರವೀಣ್ ಹೆಂಡತಿ ರೋಹಿಣಿಯನ್ನು ಕಟ್ಟಿ, ಆಕೆಯ ಬಾಯಿಗೆ ಪ್ಲಾಸ್ಟರ್ ಹಾಕಿ ತಾಯಿ ಮತ್ತು ಮಗನನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದಾದ ನಂತರ ವಿಷಯ ತಿಳಿಯುತ್ತಿದ್ದಂತೆ ಪ್ರವೀಣ್ ಸಹೋದರಿ ಮತ್ತು ಸಂಬಂಧಿಕರು ಧಾವಿಸಿದ್ದಾರೆ. ಮೃತ ಪ್ರವೀಣ್ಗೆ ಒಂದು ಹತ್ತು ತಿಂಗಳ ಮಗುವಿದ್ದು, ಅಪ್ಪ ಮತ್ತು ಅಜ್ಜಿಯನ್ನು ಕಳೆದುಕೊಂಡು ಅನಾಥವಾಗಿದೆ.
ಕೊಲೆಯ ಸುತ್ತ ಅನುಮಾನ :
ಕೊಲೆಯೇನೋ ನಡೆದಿದೆ. ಆದ್ರೆ ಈ ಕೊಲೆ ಮಾಡಿದವರು ಯಾರು ಎಂಬ ಅನುಮಾನ ಇದೀಗ ಎಲ್ಲೆಡೆ ಮನೆ ಮಾಡಿದೆ. ಆ ಅಪರಿಚಿತ ವ್ಯಕ್ತಿ ಮನೆಗೆ ಬಂದಾಗ ಆತನಿಗೆ ಬಾಗಿಲು ತೆರೆದವರು ಯಾರು, ಆತನಿಗೂ ಆ ಕುಟುಂಬಕ್ಕೂ ಏನು ಸಂಬಂಧ, ಪ್ರವೀಣ್ ಹೆಂಡತಿಯನ್ನು ಬಿಟ್ಟು ಮಗ ಮತ್ತು ತಾಯಿಯನ್ನೇ ಯಾಕೆ ಕೊಲೆ ಮಾಡಿದ ಎಂಬ ಇತ್ಯಾದಿ ಅನುಮಾನಗಳು ಹುಟ್ಟಿಕೊಂಡಿವೆ.
ಸಾಗರ ಗ್ರಾಮಾಂತರ ಭಾಗದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ಜೋಡಿ ಕೊಲೆ ಇದಾಗಿದೆ. ಕಳೆದ ತಿಂಗಳು ಶರಾವತಿ ಹಿನ್ನೀರಿನ ಬ್ಯಾಕೋಡು ಬಳಿಯ ಒಂಟಿ ಮನೆಯಲ್ಲಿನ ವೃದ್ದ ದಂಪತಿಗಳನ್ನು ಕೊಲೆ ಮಾಡಲಾಗಿತ್ತು. ಎರಡು ಕೊಲೆಯಿಂದ ಸಾಗರ ಗ್ರಾಮಾಂತರ ಭಾಗದ ಜನತೆ ನಿಜಕ್ಕೂ ಭಯಭೀತಗೊಂಡಿದ್ದಾರೆ.