ಶಿವಮೊಗ್ಗ: ಮಂಗನ ಕಾಯಿಲೆ ನಿಯಂತ್ರಣಕ್ಕೆ ಸಾಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಕಾಡಂಚಿನ ಸುಮಾರು 31 ಗ್ರಾಮಗಳಿಗೆ ಅರಣ್ಯ ಪ್ರವೇಶವನ್ನು ಮಳೆಗಾಲದವರೆಗೂ ನಿರ್ಬಂಧ ಮಾಡಿರುವುದಾಗಿ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ತಿಳಿಸಿದ್ದಾರೆ.
ಅರಣ್ಯದಂಚಿನ ಗ್ರಾಮಸ್ಥರು ಸಮೀಪದಲ್ಲಿಯೇ ಸಿಗುವ ಮರದ ಒಣಗಿದ ಎಲೆ(ದರಗು)ಯನ್ನು ತಂದು ಮನೆಯ ಬಳಿ ಸಂಗ್ರಹ ಮಾಡಿ ಅದನ್ನು ಗೊಬ್ಬರನ್ನಾಗಿ ಬಳಸಲುತ್ತಾರೆ. ಈ ಒಣ ಎಲೆಯಿಂದ ಉಣುಗು ಬೇಗ ಮನುಷ್ಯನ ಸಂಪರ್ಕಕ್ಕೆ ಬರುತ್ತದೆ. ಇದರಿಂದ ಮಂಗನ ಕಾಯಿಲೆ ಹೆಚ್ಚಾಗಲು ಕಾರಣವಾಗುತ್ತಿದೆ.
ಹೀಗಾಗಿ 31 ಗ್ರಾಮಗಳ ಜನರಿಗೆ ಅರಣ್ಯ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆಗೆ ನಿರ್ದೇಶನವನ್ನು ನೀಡಲಾಗಿದೆ. ಈ 31 ಗ್ರಾಮಗಳ ವ್ಯಾಪ್ತಿಯಲ್ಲಿಯೇ ಈ ವರ್ಷ 129 ಕೆಎಫ್‌ಡಿ ಪ್ರಕರಣಗಳು ಕಂಡು ಬಂದಿರುವುದರಿಂದ ಕಾಡಿನ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕಿದೆ. ಇದರಿಂದ ಕೆಎಫ್‌ಡಿಯನ್ನು ತಡೆಯುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿದೆ.
ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೂ 4,750 ರಕ್ತ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 139 ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಜಿಲ್ಲೆಯಲ್ಲಿ ಇದುವರೆಗೂ 3 ಜನ ಕೆಎಫ್ಡಿಯಿಂದ ಮೃತಪಟ್ಟಿದ್ದಾರೆ. ಇನ್ನೂ ಎರಡು ಪ್ರಕರಣಗಳು ಇನ್ನೂ ಧೃಡಪಟ್ಟಿಲ್ಲ ಎಂದು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ಕೆಎಫ್‌ಡಿ ಚುಚ್ಚು ಮದ್ದು ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಡಿಹೆಚ್ಓ ರಾಜೇಶ್ ಸುರಗಿಹಳ್ಳಿ, ಕೆಎಫ್‌ಡಿ ನಿರ್ದೇಶಕ ಡಾ.ಕಿರಣ್ ಹಾಗೂ ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ. ಶಂಕರಪ್ಪ ಹಾಜರಿದ್ದರು.