ಶಿವಮೊಗ್ಗ: ಬದಲಿ ಜಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡದೇ ಇರುವ ಮನೆಗಳನ್ನು ತೆರವುಗೊಳಿಸುತ್ತಿರುವುದನ್ನು ವಿರೋಧಿಸಿ ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ. ಯೋಗೀಶ್ ಮತ್ತು ಸದಸ್ಯರಾದ ನಾಗರಾಜ್ ಕಂಕಾರಿ ಅವರ ನೇತೃತ್ವದಲ್ಲಿ ನಗರದ ಇಮಾಂಬಡಾ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಪ್ರತಿ ಬಾರಿ ಮಳೆಗಾಲದಲ್ಲೂ ಇಮಾಂಬಡಾಕ್ಕೆ ನೇರವಾಗಿ ನೀರು ನುಗ್ಗುತ್ತಿದೆ. ಇಲ್ಲಿ ಸುಮಾರು 27ಕ್ಕೂ ಹೆಚ್ಚು ಮನೆಗಳಿವೆ. ಪ್ರತಿ ಬಾರಿಯೂ ಪ್ರವಾಹ ಬಂದಾಗ ಇಲ್ಲಿನ ನಿವಾಸಿಗಳಿಗೆ ಸಂಕಷ್ಟ ಎದುರಾಗುತ್ತದೆ. ಇದನ್ನು ಗಮನಿಸಿಯೇ ಮಹಾನಗರ ಪಾಲಿಕೆ ಇವರಿಗೆ ಬೇರೆ ಕಡೆ ಜಾಗ ನೀಡಿತ್ತು. ಆದರೆ ನೀಡಿರುವ ಜಾಗದಲ್ಲಿ ಯಾವುದೇ. ಮೂಲಭೂತ ಸೌಲಭ್ಯಗಳಾದ ರಸ್ತೆ, ನೀರು, ಚರಂಡಿ, ವಿದ್ಯುತ್ ಮುಂತಾದ ಸೌಲಭ್ಯಗಳಿಲ್ಲದೇ ಹೋಗುವುದಾದರೂ ಹೇಗೆ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲು ಸೌಕರ್ಯಗಳನ್ನು ಕಲ್ಪಿಸಲಿ. ಅಲ್ಲದೇ ಅಲ್ಲಿ ಕೆಲವು ಖಾಸಗಿಯವರು ಇದು ತಮ್ಮ ಜಾಗವೆಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಪಾಲಿಕೆಯವರು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಆಮೇಲೆ ಸ್ಥಳಾಂತರಗೊಳಿಸಲಿ ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಕಂದಾಯ ಅಧಿಕಾರಿಗಳು ಪರ್ಯಾಯವಾಗಿ ಮನೆ ಕಟ್ಟಿಕೊಳ್ಳಲು ನೀಡಿರುವ ಜಾಗದಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ವಿದ್ಯುತ್ ದೀಪದ ಕಾರ್ಯಗಳನ್ನು ಇಂದು ಸಂಜೆ ಒಳಗಾಗಿ ಕಲ್ಪಿಸಿಕೊಡಲಾಗುವುದು ಎಂದು ಹಾಗೂ ಸರ್ಕಾರದಿಂದ ನೀಡುವ ಪರಿಹಾರವನ್ನು ಕೂಡಲೇ ನೀಡಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.