ಶಿವಮೊಗ್ಗ: ಪ್ರಸಕ್ತ ಸಾಲಿನ ಮಣಿಪಾಲ ಕಾರ್ಡ್ ಮತ್ತು ದಂತ ಆರೋಗ್ಯ ಕಾರ್ಡುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಣಮಟ್ಟದ ಚಿಕಿತ್ಸೆ ಕೈಗೆಟುಕುವ ದರದಲ್ಲಿ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ 2000ರಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಪರಿಚಯಿಸಲಾಗಿದೆ ಎಂದರು. ವೈದ್ಯರ ಜೊತೆಗೆ ಸಮಾಲೋಚನೆ, ಪ್ರಯೋಗಾಲಯ ಪರೀಕ್ಷೆ, ಸಿಟಿ ಸ್ಕ್ಯಾನ್, ಎನ್ಆರ್ಐ, ಅಲ್ಟ್ರಾಸೌಂಡ್, ಹೊರರೋಗಿ ವಿಭಾಗ ದಾಖಲಾತಿ ಶುಲ್ಕ, ಹಾಸಿಗೆ ಮತ್ತು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ, ಮಧುಮೇಹ ತಪಾಸಣೆಗೆ ಈ ಕಾರ್ಡ್ ಮೂಲಕ ಮೊತ್ತ ಪಾವತಿಸಿ ಚಿಕಿತ್ಸೆ ಪಡೆಯಬಹುದು ಎಂದರು.
ಈ ಬಾರಿ ಒಂದು ವರ್ಷ ಹಾಗೂ ಎರಡು ವರ್ಷ ಅವಧಿಗಳ ಕಾರ್ಡನ ಬಿಡುಗಡೆಗೊಳಿಸಲಾಗಿದೆ. ಕಾರ್ಡ್ ಸದಸ್ಯತ್ವ ಒಬ್ಬರಿಗೆ ಒಂದು ವರ್ಷದ್ದು 250 ರೂ. ಕುಟುಂಬಕ್ಕೆ ರೂ. 500 ಪಾವತಿಸಬೇಕು ಎಂದರು. 2 ವರ್ಷದ ಯೋಜನೆಯಲ್ಲಿ ಕ್ರಮವಾಗಿ ಒಬ್ಬರಿಗೆ 400 ರೂ. ಕುಟುಂಬಕ್ಕೆ 700 ರೂ. ಪಾವತಿಸಿ ಕಾರ್ಡ್‌ನ ಪಡೆದುಕೊಳ್ಳಬಹುದು ಎಂದರು. ಕಾರ್ಡ್ ಪಡೆದರೆ ವೈದ್ಯರೊಂದಿಗಿನ ಸಮಾಲೋಚನೆಗೆ ಶೇ. 50 ರಷ್ಟು ರಿಯಾಯಿತಿ ನೀಡಲಾಗುವುದು. ಪ್ರಯೋಗಾಲಯ ಪರೀಕ್ಷೆಗೆ ಶೇ. 30ರಷ್ಟು ರಿಯಾಯಿತಿ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿನಂತಿಸಿದರು.