ಶಿವಮೊಗ್ಗ: ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಯುವಕ ದೂರು ವಾಪಸ್ ಪಡೆಯುವಂತೆ ಧಮ್ಕಿ ಹಾಕುತ್ತಿರುವ ಘಟನೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ ಅದೇ ಗ್ರಾಮದ ಯುವಕ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ದಾಖಲಾಗಿತ್ತು.
ಅತ್ಯಾಚಾರ ನಡೆದ ಬಳಿಕ ಯುವಕ ಈ ವಿಚಾರವನ್ನು ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಸಿದ್ದಾನೆ. ಆದರೆ ಅಪ್ರಾಪ್ತೆಯು ತನ್ನ ಅಜ್ಜಿಯ ಬಳಿ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಈ ಕುರಿತು ಆಕೆಯ ಪೋಷಕರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಬಾಲಕಿ ಮಹಿಳಾ ಮತ್ತು ಮಕ್ಕಳ ಘಟಕದಲ್ಲಿ 10 ದಿನಗಳ ಕಾಲ ರಕ್ಷಣೆಯಲ್ಲಿದ್ದಳು. ಬಳಿಕ ಬಾಲಕಿಯನ್ನು ಪೋಷಕರು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದರು.
ಇತ್ತ ದೂರು ದಾಖಲಾಗುತ್ತಿದ್ದಂತೆ ಅತ್ಯಾಚಾರ ಎಸಗಿದ ಆರೋಪಿ ತನ್ನ ತಂದೆಯ ಜೊತೆ ಆಫ್ರಿಕಾದ ಕ್ಯಾಮರೂನ್ಗೆ ಹಾರಿದ್ದಾನೆ. ಈಗ ಅಲ್ಲಿಂದಲೇ ಬಾಲಕಿಗೆ ವಾಟ್ಸ್ ಆ್ಯಪ್ ಕರೆ ಮೂಲಕ ದೂರು ವಾಪಸ್ ಪಡೆಯುವಂತೆ ಧಮ್ಕಿ ಹಾಕುತ್ತಿದ್ದಾನಂತೆ.
ಆದರೆ ದೂರು ದಾಖಲಾದರೂ ಸಹ ಅತ್ಯಾಚಾರ ಆರೋಪಿ ವಿದೇಶಕ್ಕೆ ತೆರಳಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಈಗ ಧಮ್ಕಿ ಹಾಕಿದ ಕುರಿತು ಪೊಲೀಸರಿಗೆ ತಿಳಿಸಿದರೆ, ಮತ್ತೆ ದೂರು ನೀಡಿ ಎಂದು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನೊಂದ ಕುಟುಂಬದವರು ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಪೊಲೀಸರಿಗೆ ಧಮ್ಕಿ ಹಾಕಿದ ಹಿಂದೂಪರ ಸಂಘಟನೆ ಕಾರ್ಯಕರ್ತ