ಶಿವಮೊಗ್ಗ: ರಾಜ್ಯ ಸರ್ಕಾರ ಪಾನ್ ಮಸಾಲ ನಿಷೇಧ ಪ್ರಸ್ತಾಪವನ್ನು ಕೈಬಿಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪಾನ್ ಮಸಾಲ ಪ್ಯಾಕೆಟ್ನಲ್ಲಿ ಡ್ರಗ್ಸ್ ಸೇರಿಸಿ ಮಾರಾಟ ಮಾಡುತ್ತಾರೆ ಎಂಬ ಆರೋಪದ ಹಿನ್ನೆಲೆ ಪಾನ್ ಮಸಾಲ ನಿಷೇಧ ಮಾಡಲು ಪ್ರಸ್ತಾವನೆ ಸಲ್ಲಿಸಿರುವುದು ಹಾಸ್ಯಸ್ಪದ ಎಂದರು.
ಪಾನ್ ಮಸಾಲ ಪ್ಯಾಕೆಟ್ ಮಾರಾಟಕ್ಕೂ ಡ್ರಗ್ಸ್ ಪ್ಯಾಕೆಟ್ ಮಾರಾಟಕ್ಕೂ ಯಾವುದೇ ಸಂಬಂಧವಿಲ್ಲ, ಕೇವಲ ಐದು ರೂ. ಅಡಿಕೆ ಪ್ಯಾಕೆಟ್ನಲ್ಲಿ ಸಾವಿರಾರು ರೂ. ಬೆಲೆ ಬಾಳುವ ಡ್ರಗ್ಸ್ ಭರ್ತಿ ಮಾಡಲಾಗುತ್ತದೆಯೇ? ಅಂಗಡಿಗಳಲ್ಲಿ ಮಾರಾಟ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಪಾನ್ ಮಸಾಲ ನಿಷೇಧ ಮಾಡಲು ಮುಂದಾಗಿರುವುದು ಅಡಿಕೆ ವಹಿವಾಟಿನ ಮೇಲೆ ಹಾಗೂ ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಇದರಿಂದ ಅಡಿಕೆ ಬೆಳೆಗಾರರು ಬೀದಿಗೆ ಬೀಳುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಪಾನ್ ಮಸಾಲ ನಿಷೇಧ ಮಾಡಬಾರದು, ಈ ನಿಟ್ಟಿನಲ್ಲಿ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಸಿಗರೇಟ್ ಕಂಪನಿಗಳು ಲಾಬಿ ನಡೆಸಿ ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಸರ್ಕಾರದ ಮೇಲೆ ಪ್ರಭಾವ ಬೀರುತ್ತಿವೆ ಎಂದು ಆರೋಪಿಸಿದರು.
ಅಡಿಕೆ ಬೆಳೆಗಾರರ ಕಾರ್ಮಿಕರ ಹಿತದೃಷ್ಟಿಯಿಂದ ಅಡಿಕೆ ಕಾರ್ಯಪಡೆಯ ಅಧ್ಯಕ್ಷ ಅರಗ ಜ್ಞಾನೆಂದ್ರ, ಸಂಸದ ಬಿವೈ ರಾಘವೇಂದ್ರ, ಸಚಿವ ಕೆಎಸ್ ಈಶ್ವರಪ್ಪ, ಮತ್ತು ಅಡಿಕೆ ಬೆಳೆಗಾರರ ಪ್ರದೇಶದ ಎಲ್ಲ ಶಾಸಕರು ಒಟ್ಟಾಗಿ ಸಿಎಂಗೆ ಮನವರಿಕೆ ಮಾಡಿ ಪಾನ್ ಮಸಾಲ ನಿಷೇಧ ಪ್ರಸ್ತಾಪವನ್ನು ಕೈಬಿಡುವಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.