ಶಿವಮೊಗ್ಗ : ನಗರದಲ್ಲಿ ದಸರಾದ ಅಂಗವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ರೈತ ದಸರಾ ಆಚರಣೆಯ ಭಾಗವಾಗಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೆಸರು ಗದ್ದೆ ಓಟ ಹಾಗೂ ಹಗ್ಗಜಗ್ಗಟಾ ಸ್ಪರ್ಧೆ ನಡೆಸಲಾಯಿತು.
ನಗರದ ರಾಷ್ಟ್ರೀಯ ಹೆದ್ದಾರಿ 206ರ ಮಲವಗೊಪ್ಪದ ಗದ್ದೆಯಲ್ಲಿ ರೈತ ದಸರಾದ ಅಂಗವಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 18 ವರ್ಷ ಒಳಗಿನವರು ಹಾಗೂ 18 ವರ್ಷ ಮೇಲ್ಪಟ್ಟವರು ಎಂದು ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿತ್ತು. ಹಳೆ ಮೈಸೂರು ಭಾಗದ ಜಿಲ್ಲೆಯಲ್ಲಿ ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.
18 ವರ್ಷದ ಒಳಗಿನವರ ಹಾಗೂ 18 ವರ್ಷ ಮೇಲ್ಪಟ್ಟವರ ಎರಡು ಸ್ಪರ್ಧೆಗಳು ಅತ್ಯಂತ ರೋಚಕವಾಗಿದ್ದವು. ಎರಡು ಕೆಟಗರಿಯಲ್ಲಿ ಮೊದಲು ಕೆಸರು ಗದ್ದೆ ಓಟ ಸ್ಪರ್ಧೆಯನ್ನು ನಡೆಸಲಾಯಿತು. 18 ವರ್ಷ ಮೇಲ್ಪಟ್ಟ ಮಹಿಳೆಯರ ಕೆಸರು ಗದ್ದೆ ಓಟದ ಸ್ಪರ್ಧೆಯಲ್ಲಿ ಹತ್ತು ಜನ ಭಾಗಿಯಾಗಿದ್ದರು. ವಿಶಾಲಾಕ್ಷಿ ಎಂಬುವರು ಪ್ರಥಮ ಸ್ಥಾನಗಳಿಸಿದರು.
ನಂತರ ನಡೆದ ಹಗ್ಗಜಗ್ಗಾಟದಲ್ಲಿ ಮಹಿಳೆಯರು ನಾವೇನು ಕಡಿಮೆ ಇಲ್ಲ ಎಂಬಂತೆ ಕೆಸರಿನಲ್ಲಿ ಆಟವಾಡಿದರು. ನೋಡುಗರು ಶಿಳ್ಳೆ ಹಾಕಿ, ಚಪ್ಪಾಳೆ ಹೊಡೆದು ಪ್ರೋತ್ಸಾಹ ನೀಡಿದರು. ಹಗ್ಗ- ಜಗ್ಗಾಟದಲ್ಲಿ ಗೆದ್ದ ಮಹಿಳೆಯರು ಸಂಭ್ರಮಿಸುತ್ತಲೇ ಕೆಸರು ಗದ್ದೆಯಿಂದ ಹೊರ ನಡೆದರು.
ಕೊರೊನಾದಿಂದ ಮನೆಯಲ್ಲಿದ್ದು ಬೇಜಾರ್ ಆಗಿತ್ತು. ಈಗ ನಾವು ಎಂಜಾಯ್ ಮಾಡಿದ್ವಿ ಅಂತಾರೆ ಮಹಿಳೆಯರು. ನಂತರ ನಡೆದ ಪುರುಷರ ಸ್ಪರ್ಧೆಯಲ್ಲಿ ಬಂಜಾರ್ ಬಾಯ್ಸ್ ಗೆದ್ದು ಬೀಗಿದರು. ರೈತ ದಸರಾ ಪಾಲಿಕೆಯ ಸದಸ್ಯ ರಮೇಶ್ ಹೆಗ್ಡೆರವರ ಅಧ್ಯಕ್ಷತೆಯಲ್ಲಿ ಅತ್ಯಂತ ಸುಂದರವಾಗಿ ನಡೆಯಿತು.