ಶಿವಮೊಗ್ಗ: ಇಲ್ಲಿನ ಬಾಪೂಜಿ ನಗರ, ವಿದ್ಯಾನಗರ, ಟಿಪ್ಪು ನಗರ, ಆರ್ ಎಂ ಎಲ್ ನಗರ ಹೀಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದಾಗಿ ಮನೆ ಒಳಗಿನ ವಸ್ತುಗಳು ನೀರುಪಾಲಾಗಿವೆ.
ಶಿವಮೊಗ್ಗದ ಅರ್ಧ ಭಾಗದ ನೀರು ಬಾಪೂಜಿ ನಗರದ ರಾಜ ಕಾಲುವೆಯ ಮೂಲಕ ನದಿಗೆ ಸೇರುತ್ತದೆ. ಇಲ್ಲಿನ ಒಂದು ಸಣ್ಣ ಸೇತುವೆಯಿಂದ ನೀರು ಸರಾಗವಾಗಿ ಸಾಗದೆ ನಿಂತು, ನಿಂತು ಮನೆಗಳಿಗೆ ನುಗ್ಗುತ್ತಿತ್ತು. ಇದರಿಂದ ಬಾಪೂಜಿ ನಗರದ ಪಾಲಿಕೆ ಸದಸ್ಯೆ ಸುರೇಖಾ ಮುರುಳಿಧರ್ ಅವರು ನೀರು ಸರಾಗವಾಗಿ ಸಾಗಲು ತೂಂದರೆಯನ್ನುಂಟು ಮಾಡುತ್ತಿದ್ದ ಸಣ್ಣ ಸೇತುವೆಯನ್ನು ಜೆಸಿಬಿಯಿಂದ ತೆಗೆದು ಹಾಕಿಸಲಾಯಿತು. ಕಿರು ಸೇತುವೆ ತೆಗೆದ ನಂತರ ನೀರು ಮುಂದಕ್ಕೆ ಸಾಗಿದ್ದರಿಂದ ರಸ್ತೆಯಲ್ಲಿದ್ದ ನೀರೆಲ್ಲಾ ಚರಂಡಿಗೆ ಸೇರಿದೆ.
ಹಾಗೆಯೇ ಮಳೆಯಿಂದಾಗಿ ಇಲ್ಲಿನ ಐದನೇ ಕ್ರಾಸ್ನ ಜಯಮ್ಮ ಎಂಬುವರ ಮನೆಯ ಗೋಡೆಯೊಂದು ಕುಸಿದು ಬಿದ್ದಿದೆ. ಸದ್ಯ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ. ಅದೇ ರೀತಿ ಟಿಪ್ಪು ನಗರ, ಆರ್ ಎಂ ಎಲ್ ನಗರ ಸೇರಿದಂತೆ ಇತರೆಡೆ ಮಳೆಯಿಂದ ಇದೇ ಪರಿಸ್ಥಿತಿ ಇದೆ. ಹೀಗಾಗಿ ಪಾಲಿಕೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನೀರು ಹೊರ ಹಾಕುವ ಕಾರ್ಯ ನಡೆಸುತ್ತಿದ್ದಾರೆ.
ಬಾಪೂಜಿ ನಗರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿರುವುದರಿಂದ ಅಲ್ಲಿನ ನಿವಾಸಿಗಳಿಗೆ ಜೋಸೆಫ್ ನಗರದ ಸರ್ಕಾರಿ ಶಾಲೆಯಲ್ಲಿ ಸದ್ಯದ ಮಟ್ಟಿಗೆ ಗಂಜಿ ಕೇಂದ್ರ ತೆರೆಯಲಾಗಿದೆ.