ಶಿವಮೊಗ್ಗ: ಜಿಲ್ಲೆಯ ಮೂವರು ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಾಗರದ ಸರ್ಕಾರಿ ಪಿಯು ಕಾಲೇಜಿನ ಸಿಂಧು 600ಕ್ಕೆ 595 ಅಂಕಗಳನ್ನು ಗಳಿಸಿದರೆ, ವಿಜ್ಞಾನ ವಿಭಾಗದಲ್ಲಿ ಇದೇ ಕಾಲೇಜಿನ ಅಖಿಲಾ ಹೆಗ್ಡೆ 600ಕ್ಕೆ 594 ಅಂಕಗಳ ಸಾಧನೆ ಮಾಡಿದ್ದಾರೆ.
ಶಿವಮೊಗ್ಗದ ಆದಿಚುಂಚನಗಿರಿ ಪಿಯು ಕಾಲೇಜಿನ ಸಹನಾ ಎಂಬ ವಿದ್ಯಾರ್ಥಿನಿ 600ಕ್ಕೆ 594 ಅಂಕಗಳನ್ನು ಗಳಿಸಿದ್ದಾರೆ. ಅಖಿಲಾ ಹೆಗ್ಡೆ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಸಂಸ್ಕೃತ, ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಗಣಿತ, ಗಣಕ ವಿಜ್ಞಾನದಲ್ಲಿ ನೂರಕ್ಕೆ 100 ಅಂಕ ಹಾಗೂ ಇಂಗ್ಲಿಷ್‌ನಲ್ಲಿ 94 ಅಂಕ ಪಡೆದಿದ್ದಾರೆ.
ಶಿವಮೊಗ್ಗದ ಆದಿಚುಂಚನಗಿರಿಯ ಸಹನಾ, ರಾಸಾಯನ ಶಾಸ್ತ್ರ, ಗಣಿತ ಹಾಗೂ ಭೌತಶಾಸ್ತ್ರದಲ್ಲಿ 100ಕ್ಕೆ ನೂರು ಅಂಕ ಗಳಿಸಿದ್ದಾರೆ. ಕನ್ನಡದಲ್ಲಿ 98, ಇಂಗ್ಲಿಷ್‌ನಲ್ಲಿ 95 ಹಾಗೂ ಜೀವಶಾಸ್ತ್ರದಲ್ಲಿ 95 ಅಂಕಗಳನ್ನು ಗಳಿಸಿದ್ದಾರೆ. ಸಾಗರದಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ಸಿಂಧೂ, ಇಂಗ್ಲಿಷ್‌ನಲ್ಲಿ 95, ಸಂಸ್ಕೃತ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ, ಅಕೌಂಟ್ಸ್, ಗಣಕ ವಿಜ್ಞಾನ ವಿಷಯದಲ್ಲಿ ನೂರಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಸಾಗರದ ಶಾಸಕ ಹರತಾಳು ಹಾಲಪ್ಪ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ. ಈ ಮೂಲಕ ಅವರ ಮುಂದಿನ ಜೀವನಕ್ಕೆ ಶುಭ ಕೋರಿದ್ದಾರೆ. ಅದೇ ರೀತಿ ಆದಿ ಚುಂಚನಗಿರಿಯ ಕಾಲೇಜಿನ ವಿದ್ಯಾರ್ಥಿನಿಗೆ ಕಾಲೇಜಿನ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಫಲಿತಾಂಶದ ಬಗ್ಗೆ ಸಂತಸ ಹಂಚಿಕೊಂಡಿರುವ ಸಹನಾ, ಕಾಲೇಜು ಹಾಗೂ ಮನೆಯಲ್ಲಿ ಓದಲು ಸಾಕಷ್ಟು ಅನುಕೂಲ ಮಾಡಿಕೊಟ್ಟರು. ಹೆಚ್ಚು ಕಾಲ ಕಾಲೇಜಿನಲ್ಲಿಯೇ ಇದ್ದು ಓದುತ್ತಿದ್ದೆ. ನನಗೆ ಇಷ್ಟೊಂದು ಅಂಕ ಬರುವ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ. ಮುಂದೆ ಇಂಜಿನಿಯರಿಂಗ್ ಮಾಡಬೇಕೆಂಬ ಆಸೆಯಿರುವುದಾಗಿ ಅವರು ತಿಳಿಸಿದರು.
ಸಹನಾ ತಂದೆ ಎನ್.ಆರ್.ಪುರದ ಪಿಯು ಕಾಲೇಜಿನಲ್ಲಿ ರಾಜ್ಯ ಶಾಸ್ತ್ರದ ಉಪನ್ಯಾಸಕರಾಗಿದ್ದು, ಮಗಳ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. ಆಕೆ ಮನೆಯಲ್ಲಿ ತುಂಬ ಓದುತ್ತಿದ್ದಳು. ಆದರೆ ಇಷ್ಟೊಂದು ಅಂಕ ಬಂದಿರುವುದು ನನಗೆ ಸಂತಸ ತಂದಿದೆ ಎಂದಿದ್ದಾರೆ.