ಶಿವಮೊಗ್ಗ: ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿರುವ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರೈತರನ್ನು ಬೀದಿಗೆ ತರಲು ಸರ್ಕಾರ ಹೊರಟಿದೆ. ಈ ಕಾಯ್ದೆಗಳು ಜಾರಿಯಾದರೆ ರೈತರು ಕಂಪನಿಗಳ, ರಾಜಕಾರಣಿಗಳ, ಬಂಡವಾಳಶಾಹಿಗಳ ಜಮೀನಿನಲ್ಲಿ ಜೀತದಾಳಾಗಿ ದುಡಿಯಬೇಕಾಗುತ್ತದೆ. ಹಾಗಾಗಿ ಎಪಿಎಂಸಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದನ್ನು ಕೈಬಿಡಬೇಕು, ಭೂ ಸುಧಾರಣಾ ಕಾಯ್ದೆಯನ್ನು ರದ್ದುಪಡಿಸಬೇಕು, ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಅಷ್ಟು ತುರ್ತಾಗಿ ಸುಗ್ರೀವಾಜ್ಞೆ ಹೊರಡಿಸಿ ಈ ಕಾಯ್ದೆಗಳನ್ನು ಜಾರಿಗೆ ತರುವ ಅವಶ್ಯಕತೆ ಇರಲಿಲ್ಲ. ಆದರೂ ಸರ್ಕಾರ ಈ ಕಾಯ್ದೆಗಳನ್ನು ರೈತರ ಮೇಲೆ ಹೇರುತ್ತಿದೆ. ರೈತರಿಗೆ ಮಾರಕ ಆಗಿರುವ ಈ ಕಾಯ್ದೆಗಳನ್ನು ರದ್ದು ಮಾಡದೇ ಹೋದರೆ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.