ಶಿವಮೊಗ್ಗ: ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಅಲೆಮಾರಿಗಳಿಗೆ ಮನೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನಗರ ಸಮೀಪದ ಶ್ರೀರಾಂಪುರ ಗ್ರಾಮದ ಬಳಿ ಹಲವು ವರ್ಷಗಳಿಂದ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದವರಿಗೆ ಆಯನೂರು ಬಳಿ ವೀರಣ್ಣ ಬೆನವಳ್ಳಿ ಗ್ರಾಮದ ಸರ್ವೆ ನಂಬರ್ 78ರ 48 ಎಕರೆ ಜಾಗದಲ್ಲಿ 4 ಎಕರೆ ಮಂಜೂರು ಮಾಡಲಾಗಿದೆ. ಆದರೆ ಇವರನ್ನು ಏಕಾಏಕಿ ಒಕ್ಕಲೆಬ್ಬಿಸಿ ಅಲ್ಲಿಂದ ಹೊರ ದಬ್ಬಲಾಗಿದೆ ಎಂದು ಆರೋಪಿಸಿದರು.
ಹೀಗಾಗಿ ಪುನಃ ಶ್ರೀರಾಮಪುರದಲ್ಲಿ ಟೆಂಟ್ ಹಾಕಿಕೊಂಡು ರುದ್ರಾಕ್ಷಿ, ದೃಷ್ಟಿ ಗೊಂಬೆ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಈಗ ಖಾಸಗಿ ಮಾಲೀಕರು ತೆರವುಗೊಳಿಸಲು ಮುಂದಾಗಿದ್ದು, ವಾಸಿಸಲು ಯಾವುದೇ ಜಾಗವಿಲ್ಲದಂತಾಗಿದೆ. ಹಾಗಾಗಿ ವೀರಣ್ಣ ಬೆನವಳ್ಳಿ ಗ್ರಾಮದಲ್ಲಿ ಮಂಜುರಾದ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.