ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಚೆನ್ನಗಿರಿ ತಾಲೂಕಿನ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ಅಧೀಕ್ಷಕರಾದ ಸಣ್ಣ ತಿಮ್ಮಪ್ಪರವರು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಣ್ಣ ತಿಮ್ಮಪ್ಪನವರು ಕೆಲಸದ ಅವಧಿಯಲ್ಲಿ ತಮ್ಮ ಸಹೋದ್ಯೋಗಿ ಮಹಿಳೆಯ ಜೊತೆ ನಡೆಸಿದ ಅಶ್ಲೀಲ ಸಂಭಾಷಣೆ ಆಡಿಯೋ ಸ್ಥಳೀಯ ಪ್ರದೇಶದಲ್ಲಿ ವೈರಲ್ ಆಗಿದ್ದು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿಗಳಿಗೆ ದೂರು ಸಲ್ಲಿಸಿದರೂ ಕೂಡ ಇವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಆರೋಪಿಗೆ ವಿಶ್ವ ವಿದ್ಯಾಲಯದ ಕುಲಪತಿಗಳು ಬೆನ್ನೆಲುಬಾಗಿ ನಿಂತಿರುವುದು ಅತ್ಯಂತ ಖಂಡನೀಯ ಎಂದು ಆಗ್ರಹಿಸಿದರು.
ವಿಶ್ವವಿದ್ಯಾಲಯಕ್ಕೆ ಸೇರಿದ ನೂರಾರು ಎಕರೆ ಜಮೀನಿನಲ್ಲಿ ಬೆಳೆಯುವ ಬೆಳೆಯಲ್ಲಿ ಸರ್ಕಾರಕ್ಕೆ ಬರಬೇಕಾದ ಕೋಟ್ಯಾಂತರ ರೂಪಾಯಿ ಆದಾಯವನ್ನು ಲೂಟಿ ಮಾಡುತ್ತಿದ್ದಾರೆ. ಆದ್ದರಿಂದ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ಸ್ವಾಸ್ಥ್ಯವನ್ನು ತಮ್ಮ ಅಕ್ರಮ ಚಟುವಟಿಕೆಗಳಿಂದ ಹಾಳು ಮಾಡಲು ಮುಂದಾಗಿರುವ ಅಧೀಕ್ಷಕ ಹೆಚ್.ಜಿ ಸಣ್ಣ ತಿಮ್ಮಪ್ಪ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.