ಶಿವಮೊಗ್ಗ: ಹಕ್ಕುಪತ್ರ ನೋಂದಣಿ ಮಾಡದ ಜೋಗ - ಕಾರ್ಗಲ್ ಪಟ್ಟಣ ಪಂಚಾಯತ್ ನೀತಿಯನ್ನು ವಿರೋಧಿಸಿ ವಿಧಾನಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ಜೋಗ-ಕಾರ್ಗಲ್ ಪಟ್ಟಣ ಪಂಚಾಯತ್ನ 3,4,5,6 ರ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ಕಾರ್ಗಲ್ನ ಮಹಾತ್ಮ ಗಾಂಧೀ ಪಾರ್ಕ್ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಇವರೆಲ್ಲಾ ಸೇರಿಕೊಂಡು ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ.
ಕಳೆದ 21 ವರ್ಷಗಳಿಂದ ಸಾಗರದ ತಹಶೀಲ್ದಾರ್ ನೀಡಿರುವ ಹಕ್ಕು ಪತ್ರದ ಆಧಾರದಂತೆ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಖಾತೆ ನೋಂದಣಿ ಮಾಡದೇ ಸತಾಯಿಸುತಿದ್ದಾರೆ. ಯಾವುದೇ ಮೂಲ ಸೌಲಭ್ಯಗಳನ್ನು ಪಡೆಯಲು ಹಕ್ಕು ಪತ್ರ, ಮತ್ತು ಪಟ್ಟಣ ಪಂಚಾಯಿತಿಯ ಅಧಿಕೃತ ಖಾತಾ ನಕಲು, ನಮೂನೆ 3 ರ ಅಗತ್ಯವಿರುತ್ತದೆ. ಆದರೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಇದಾವುದನ್ನು ನೀಡದೇ ಕೇವಲ ಅರಣ್ಯ ಭೂಮಿ ವಿಚಾರವನ್ನು ಮುಂದಿಟ್ಟುಕೊಂಡು ಕಾಟ ಕೊಡುತ್ತಿದ್ದಾರೆ.
ಇದರಿಂದ ಜೋಗದ ನಿವಾಸಿಗಳು ಹೈರಾಣಾಗಿದ್ದಾರೆ. ಈ ಹಿಂದೆ ತಹಶೀಲ್ದಾರ್ ನೀಡಿರುವ 622 ಹಕ್ಕು ಪತ್ರಗಳನ್ನು ಅಧಿಕೃತ ಎಂದು ಪರಿಗಣಿಸಿ ಪಟ್ಟಣ ಪಂಚಾಯಿತಿಯಲ್ಲಿ ಖಾತೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಜೋಗದ ನಿವಾಸಿಗಳ ಆಗ್ರಹಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ನಮಗೆ ಹಕ್ಕುಪತ್ರದ ಭರವಸೆ ಸಿಗುತ್ತದೆ. ಆದರೆ, ಹಕ್ಕುಪತ್ರ ಮಾತ್ರ ಸಿಗುತ್ತಿಲ್ಲ. ಇದರಿಂದ ನಿವಾಸಿಗಳು, ನಮಗೆ ಹಕ್ಕು ಪತ್ರವನ್ನು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಎಸ್.ಎಲ್. ರಾಜಕುಮಾರ್, ಸೋಮಸುಂದರ, ಮಂಜುನಾಥ ಉಳ್ಳಾಲೆ, ಪಳನಿ, ಕೀಜರ್ ಭಾಷಾ, ಗಂಗಾಧರ, ಕೇಶವ, ಜ್ಯೋತಿ, ಪಾರ್ವತಿ ಇನ್ನಿತರರು ಉಪಸ್ಥಿತರಿದ್ದರು.
ಕಾಫಿನಾಡಲ್ಲಿಯೂ ಕಂಡ ಚುನಾವಣಾ ಬಹಿಷ್ಕಾರದ ಬ್ಯಾನರ್: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕೊಪ್ಪ ತಾಲೂಕಿನ ಹಾಡುಗಾರ ಗ್ರಾಮದ ರಸ್ತೆ ಅಭಿವೃದ್ಧಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಲಿಲ್ಲ. ಗಡುವು ನೀಡಿದರೂ ರಸ್ತೆ ಮಾಡಲು ಮುಂದಾಗದ ಹಿನ್ನೆಲೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿ ಇಲ್ಲಿನ ಜನರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ಮೂಲ ಸೌಲಭ್ಯ, ರಸ್ತೆ, ಸೇತುವೆಗೆ ಆಗ್ರಹಿಸಿ ಬಿಜೆಪಿ, ಕಾಂಗ್ರೆಸ್ ಬೂತ್ ಸಮಿತಿಯ ಸದಸ್ಯತ್ವಕ್ಕೆ ಕಾರ್ಯಕರ್ತರು ರಾಜೀನಾಮೆ ಕೂಡ ಸಲ್ಲಿಸಿದ್ದಾರೆ.
ಮನೆಯ ಗೇಟಿಗೆ ಅಪ್ರವೇಶದ ಬ್ಯಾನರ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುಂಡೋಳಿ ಮೂಲೆಯ ಮನೆಯೊಂದರ ಮುಂಭಾಗದ ಗೇಟಿನಲ್ಲಿ ಯಾವುದೇ ರಾಜಕೀಯ ಪಕ್ಷದವರಿಗೆ ನಮ್ಮ ಗೇಟಿನ ಒಳಗೆ ಪ್ರವೇಶವಿಲ್ಲ ಎಂದು ಬ್ಯಾನರ್ ಹಾಕಿದ್ದಾರೆ. ಇದಕ್ಕೆ ಕಾರಣ ಈ ಮನೆಯವರು ಅಲ್ಲಿನ ರಸ್ತೆ ಅಭಿವೃಧ್ದಿ ಸಮಯದಲ್ಲಿ ಅಗ್ಯವಾಗಿದ್ದ ಮಣ್ಣನ್ನು ತಮ್ಮ ಕೃಷಿ ಭೂಮಿಯಿಂದಲೇ ನೀಡಿದ್ದರು. ಆದರೆ, ರಸ್ತೆಗೆ ಸುರಿಯುವ ಮಣ್ಣು ಮಳೆಗಾಲದಲ್ಲಿ ವಾಪಸ್ ಬಂದು ಮೋರಿಯಲ್ಲಿ ಸಿಕ್ಕಿಕೊಳ್ಳುತ್ತಿತ್ತು. ಇದರಿಂದ ನೀರು ತಮ್ಮ ಕೃಷಿ ಭೂಮಿಯಲ್ಲಿಯೇ ತುಂಬಿಕೊಳ್ಳುತ್ತಿತ್ತು. ಇದನ್ನು ಸರಿಪಡಿಸುವಂತೆ ಮನವಿಯನ್ನು ಸಲ್ಲಿಸಿದರೂ ಯಾರು ಇದುವರೆಗೆ ಇದನ್ನು ಸರಿಪಡಿಸಿಲ್ಲ ಎನ್ನುವುದು ಈ ಮನೆಯವರ ಆರೋಪವಾಗಿತ್ತು. ಹೀಗಾಗಿ ಅವರು ಈ ರೀತಿಯ ಬ್ಯಾನರ್ನ್ನು ತಮ್ಮ ಮನೆಯ ಮುಂಭಾಗದ ಗೇಟಿಗೆ ಹಾಕಿದ್ದಾರೆ.
ಇದನ್ನೂ ಓದಿ: ಪದ್ಮನಾಭನಗರ ಕೈ ಅಭ್ಯರ್ಥಿ ರಘುನಾಥ್ ನಾಯ್ಡು ಸೇರಿ 50 ಮಂದಿಗೆ 'ಬಿ' ಫಾರಂ ನೀಡಿದ ಡಿಕೆಶಿ