ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿ ಎದೆನೋವಿನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಅಬು ಸಲೇಹ ಎಂದು ಗುರುತಿಸಲಾಗಿದೆ. ಅಬು ಸಲೇಹ ಕಳೆದ ಮೂರು ವರ್ಷಗಳ ಹಿಂದೆ ಮಹಿಳೆಯ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ.
ಆರೋಪಿಯ ಕೊಲೆ ಪ್ರಕರಣ ಕೋರ್ಟ್ ನಲ್ಲಿ ಇತ್ತು. ಈತನಿಗೆ ಇನ್ನೇನು ಜಾಮೀನು ಲಭ್ಯವಾಗುವುದರಲ್ಲಿ ಇತ್ತು. ಆದರೆ, ಅಷ್ಟರಲ್ಲೇ ಅಬು ಸಲೇಹ ಎದೆ ನೋವಿನಿಂದ ಮೃತಪಟ್ಟಿದ್ದಾನೆ. ಈತನನ್ನು ಜೈಲು ವೈದ್ಯರು ತಪಾಸಣೆ ನಡೆಸಿದ ಬಳಿಕ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆ ತರಲಾಗಿತ್ತು.
ಜೈಲು ಸಿಬ್ಬಂದಿಗಳ ನಿರ್ಲಕ್ಷ್ಯ ಆರೋಪ : ಅಬು ಸಲೇಹ ತನಗೆ ಎದೆ ನೋವಿದೆ ಎಂದು ತನ್ನ ವಕೀಲರ ಬಳಿ ಅಳಲು ತೋಡಿಕೊಂಡಿದ್ದ.ಜೊತೆಗೆ ಮೂರು ನಾಲ್ಕು ಬಾರಿ ಎದೆ ನೋವು ಕಾಣಿಸಿಕೊಂಡಿರುವ ಬಗ್ಗೆ ತನ್ನ ವಕೀಲರಲ್ಲಿ ಹೇಳಿಕೊಂಡಿದ್ದನು ಎಂದು ತಿಳಿದುಬಂದಿದೆ.
ಎದೆ ನೋವು ಎಂದು ಹೇಳಿದರೂ ಕಾರಾಗೃಹದ ಅಧಿಕಾರಿಗಳು ಅಬುಸಲೇಹ್ಗೆ ಸರಿಯಾಗಿ ಸ್ಪಂದಿಸಿಲ್ಲ. ಪತಿ ಮೃತಪಟ್ಟಿರುವ ಬಗ್ಗೆ ನಮ್ಮ ವಕೀಲರಿಂದ ತಿಳಿದು ಬಂದಿದೆ. ಈ ಬಗ್ಗೆ ಕಾರಾಗೃಹದ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಮೃತ ಅಬು ಸಲೇಹನ ಪತ್ನಿ ಫರ್ಹಾನ್ ಬಾನು ಆರೋಪಿಸಿದ್ದಾರೆ.
ಇದನ್ನೂ ಓದಿ : ಸುಳ್ಯ ಬಳಿ ಮದುವೆಗೆ ಹೊರಟ ಕಾರು ಅಪಘಾತ: ತಾಯಿ-ಮಗು ದುರ್ಮರಣ