ಶಿವಮೊಗ್ಗ: ಇಲ್ಲಿನ ಸೋಗಾನೆಯಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 80 ರ ಹರೆಯಕ್ಕೆ ಕಾಲಿಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಶೇಷ ರೀತಿಯಲ್ಲಿ ಜನ್ಮದಿನದ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ಮೊಬೈಲ್ ಟಾರ್ಚ್ ಆನ್ ಮಾಡಿ ಶುಭಕೋರಿ ಎಂದು ಮನವಿ ಮಾಡಿದರು. ಅದರಂತೆ ಜನರೂ ಟಾರ್ಚ್ ಹೊತ್ತಿಸಿ ಗೌರವ ಸೂಚಿಸಿದರು.
ಬಳಿಕ ಯಡಿಯೂರಪ್ಪ ಅವರ ಸಾಧನೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ಇಂದು ವಿಮಾನ ನಿಲ್ದಾಣ ಉದ್ಘಾಟನೆಯಲ್ಲದೇ, ಬಿಎಸ್ವೈ ಅವರ ಜನ್ಮದಿನವೂ ಇರುವುದು ವಿಶೇಷ. ರಾಜ್ಯದ ಜನಪ್ರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ದೀರ್ಘಾಯುಷ್ಯರಾಗಿ ಬಾಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ. ಅವರು ಬಡವರ ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ವಿಧಾನಸಭೆಯಲ್ಲಿ ಅವರು ಮಾಡಿದ ವಿದಾಯ ಭಾಷಣ ಸಾರ್ವಜನಿಕರ ಜೀವನದಲ್ಲಿ ನಮ್ಮೆಲ್ಲರಿಗೆ ಸ್ಫೂರ್ತಿದಾಯಕ ಎಂದು ಬಣ್ಣಿಸಿದರು.
ಜೀವನದಲ್ಲಿ ಯಶಸ್ಸು ಸಾಧಿಸಿದ ನಂತರವೂ ವಿನಮ್ರತೆ ಮತ್ತು ಸಹಜವಾಗಿ ಬದುಕುವುದನ್ನು ಯಡಿಯೂರಪ್ಪರಿಂದ ಕಲಿಯಬೇಕು. ಅವರು ಸಾಗಿಬಂದ ಜೀವನ ಮತ್ತು ವಿಧಾನಸಭೆಯಲ್ಲಿ ಅವರ ಭಾಷಣ ನನಗೆ, ಇತರರಿಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ. ಅವರು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕ ಎಂದು ಗುಣಗಾನ ಮಾಡಿದರು.
ವಿಮಾನ ನಿಲ್ದಾಣ ಉದ್ಘಾಟನೆ: ನಗರದ ಸೋಗಾನೆಯಲ್ಲಿ ನಿರ್ಮಿಸಲಾಗಿರುವ ನೂತನ ಭವ್ಯ ವಿಮಾನ ನಿಲ್ದಾಣವನ್ನು ಇದೇ ವೇಳೆ ಉದ್ಘಾಟಿಸಿದ ಪ್ರಧಾನಿ ಮೋದಿ, ಇಂದು ಶಿವಮೊಗ್ಗ ತನ್ನದೇ ಆದ ವಿಮಾನ ನಿಲ್ದಾಣವನ್ನು ಪಡೆದುಕೊಂಡಿದೆ. ಇದು ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ. ವಿಮಾನ ನಿಲ್ದಾಣವು ಭವ್ಯ ಮತ್ತು ಸುಂದರವಾಗಿದೆ. ಕರ್ನಾಟಕದ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ಅಪೂರ್ವ ಮಿಶ್ರಣವನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವಿಮಾನ ನಿಲ್ದಾಣವು ಕನಸುಗಳನ್ನು ಬೆನ್ನಟ್ಟಲು ಸ್ಫೂರ್ತಿ ನೀಡುತ್ತದೆ. ರಾಜ್ಯದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ವೆಚ್ಚದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಭಾವಿಸುವೆ ಎಂದರು.
ಮಲೆನಾಡ ಅಭಿವೃದ್ಧಿಗೆ ಸರ್ಕಾರ ಬದ್ಧ: ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲಾಗಿದೆ. ಇಲ್ಲಿರುವ ಆಶ್ರಮಗಳು, ಜೋಗಜಲಪಾತ ಸಂಸ್ಕೃತಿ ನಿಸರ್ಗದ ಪ್ರತೀಕವಾಗಿದೆ. 40 ಸಾವಿರಕ್ಕೂ ಅಧಿಕ ಮನೆಗಳಿಗೆ ನಲ್ಲಿಗಳ ಮೂಲಕ ಪ್ರತಿ ಮನೆಗೆ ನೀರು ಒದಗಿಸಲಾಗಿದೆ. ಬಿಜೆಪಿ ಸರ್ಕಾರ ಹಿಂದುಳಿದವರ ಅಭಿವೃದ್ಧಿಯ ಪರವಾಗಿದೆ ಎಂದು ಸರ್ಕಾರದ ಯೋಜನೆ, ಸಾಧನೆಯನ್ನು ಪ್ರಧಾನಿಗಳು ರಾಜ್ಯದ ಜನರ ಮುಂದಿಟ್ಟರು.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ನರೇಂದ್ರ ಮೋದಿ.. ಯಡಿಯೂರಪ್ಪ ಗುಣಗಾನ ಮಾಡಿದ ಪ್ರಧಾನಿ